ಯಲ್ಲಾಪುರ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶ್ರೀಗ್ರಾಮದೇವಿ ಜಾತ್ರಾ ಮಹೋತ್ಸವ ಬುಧವಾರ ಸಂಜೆ ದೇವಿಯರ ಭವ್ಯ ಮೆರವಣಿಗೆಯೊಂದಿಗೆ ಆರಂಭವಾಯಿತು. ೩೦ ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯ ವೈಭವ ಕಣ್ತುಂಬಿಕೊಂಡರು. ಬೆಳಗ್ಗೆ ಶ್ರೀದೇವಿಯರಿಗೆ ವಿಶೇಷ ಅಲಂಕಾರ, ಸಾಂಪ್ರದಾಯಿಕ ವಿಧಿ ವಿಧಾನದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ, ದೇವಿಯರ ವಿವಾಹ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಶಳೆದೇವರಿಂದ ರಣ ತಂದ ನಂತರ ಧಾರ್ಮಿಕ ವಿಧಿ-ವಿಧಾನ ಪೂರೈಸಿ ದೇವಿಯರ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ಆಗಮಿಸಿದ ದೇವಿಯರ ದರ್ಶನ ಪಡೆದ ಭಕ್ತರು ಹರ್ಷೋದ್ಗಾರಗಳೊಂದಿಗೆ ಜಯಘೋಷ ಮೊಳಗಿಸಿದರು. ರಂಗವಲ್ಲಿ, ತಳಿರು, ತೋರಣ, ಕೇಸರಿ ಪತಾಕೆಗಳಿಂದ ಶೃಂಗಾರಗೊಂಡ ಪೇಟೆಯ ಬೀದಿಯಲ್ಲಿ ಮೆರವಣಿಗೆ ಸಾಗಿ ಬಂತು. ಭಕ್ತರೇ ಶ್ರೀದೇವಿಯರನ್ನು ತಲೆಯ ಮೇಲೆ ಹೊತ್ತು ತರುವ ಮೂಲಕ ನೆಡೆಯುವ ಜಾತ್ರಾ ಮೆರವಣಿಗೆ ಉಳಿದೆಲ್ಲಾ ಕಡೆಗಳಿಂತ ಭಿನ್ನವಾಗಿರುವುದು ವಿಶೇಷ.
ರಸ್ತೆಯುದ್ದಕ್ಕೂ ಕಿಕ್ಕಿರಿದ ಜನಸಂದಣಿಯ ನಡುವೆ ದೇವಿಯರು ಸಾಗಿ ಬರುವ ಸಂದರ್ಭದಲ್ಲಿ ಪರಸ್ಪರ ಮುಖಾಮುಖಿಯಾದಾಗ ಜನರು ಕರತಾಡನ ಮಾಡಿ, ಜಯಘೋಷ ಹಾಕಿದರು. ದೇವಿ ಮೈದಾನದಲ್ಲಿ ನಿರ್ಮಿಸಿದ ಗದ್ದುಗೆಯತ್ತ ಸಾಗಿ ೫.೧೦ ರ ಹೊತ್ತಿಗೆ ಗದ್ದುಗೆಯಲ್ಲಿ ವಿರಾಜಮಾನರಾದರು. ಬೆಳಗ್ಗೆಯಿಂದಲೇ ಜಮಾಯಿಸಿದ ಜನರು ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ಮೆರವಣಿಗೆಯ ವೈಭವಕ್ಕೆ ಸಾಕ್ಷಿಯಾದರು. ಮೆರವಣಿಗೆಯ ಮಾರ್ಗದಲ್ಲಿ ಭಕ್ತರು ಸ್ವಯಂ ಸ್ಫೂರ್ತಿಯಿಂದ ಪಾನಕ, ತಂಪು ಪಾನೀಯಗಳನ್ನು ವಿತರಿಸಿದರು.
ನೂಕು ನುಗ್ಗಲು:
ದೇವಿ ಮೆರವಣಿಗೆ ಗದ್ದುಗೆ ತಲುಪುವ ವೇಳೆ ಗಾಂಧಿ ಸರ್ಕಲ್‌ನಿಂದ ದೇವಿ ಮೈದಾನದವರೆಗೆ ಭಾರಿ ನೂಕುನುಗ್ಗಲು ಉಂಟಾಯಿತು. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹೈರಾಣಾದರು. ಈ ವೇಳೆ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಗಮನ ಸೆಳೆದ ವಾದ್ಯಮೇಳ:
ಬೆಳ್ತಂಗಡಿ ತಂಡದ ಗೊಂಬೆ ನೃತ್ಯ, ಅಂಕೋಲಾದ ಅಲಗೇರಿಯ ಝಾಂಜ್ ತಂಡದ ಅಬ್ಬರ, ಶಬರಿ ತಂಡದವರ ಚಂಡೆಯ ಅಬ್ಬರ, ವಾದ್ಯತಂಡಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು. ಜೋಗತಿಯರ ಭಕ್ತಿಯ ಪರಾಕಾಷ್ಠತೆಯ ವೈಭವ, ವಾದ್ಯಗಳ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕುವ ಯುವ ಸಮುದಾಯದ ಸಂಭ್ರಮ ಗಮನ ಸೆಳೆಯಿತು.