ಯಲ್ಲಾಪುರ: ಪಟ್ಟಣದ ದೇವಿ ಮೈದಾನ ಸಾರ್ವಜನಿಕ ಗಜಾನನೋತ್ಸವಕ್ಕೆ ಗುಜರಾತ್ನ ಸ್ವಾಮಿನಾರಾಯಣ ಪಂಥದ ಸಾಧು ಸಂತ ವಲ್ಲಭದಾಸ ಗುರೂಜಿ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮೂರ್ತಿ ಕಲಾವಿದರಾದ ಸಂತೋಷ ಗುಡಿಗಾರ, ಆದಿತ್ಯ ಗುಡಿಗಾರ, ಸಮಿತಿಯ ಅಧ್ಯಕ್ಷ ಉಲ್ಲಾಸ ಪ್ರಭು, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ, ಸದಸ್ಯ ಅಮೃತ ಬದ್ದಿ ಉಪಸ್ಥಿತರಿದ್ದರು.
ದೇವಿ ಮೈದಾನದಲ್ಲಿ 40ನೇ ವರ್ಷದ ಸಾರ್ವಜನಿಕ ಗಜಾನನೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯುತ್ತಿದೆ. ಸತ್ಯ ಗಣಪತಿ ಕಥೆ, ಗಣಹವನ ಮುಂತಾದ ಧಾರ್ವಿುಕ ಕಾರ್ಯಕ್ರಮಗಳು ನಡೆಯುತ್ತಿವೆ.
ವಿವಿಧ ಕಾರ್ಯಕ್ರಮ: ಉತ್ಸವದ ಅಂಗವಾಗಿ ಸೆ. 3ರಂದು ಸಂಜೆ 7ಕ್ಕೆ ಭಾಗವತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಡಮಾಮಿ ನೃತ್ಯ ಪ್ರದರ್ಶನ ನಡೆಯಲಿದೆ. ಸೆ. 4ರಂದು ಅಥರ್ವಶೀರ್ಷ ಹವನ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಉತ್ಸವ ಮೂರ್ತಿ ಹಾಗೂ ಮಂಗಲಮೂರ್ತಿಗೆ ಬಂಗಾರದ ಜನಿವಾರ ಸಮರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಅಢಾವೆ ಪತ್ರಿಕೆ ಲೋಕಾರ್ಪಣೆ ನಡೆಯಲಿದೆ. ನಂತರ ಎದೆ ತುಂಬಿ ಹಾಡುವೆನು ಖ್ಯಾತಿಯ ಅಂಕೋಲಾದ ವರ್ಷಿಣಿ ಶೆಟ್ಟಿ ಹಾಗೂ ದರ್ಶಿನಿ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಸೆ. 5ರಂದು ಸಂಜೆ 7ಕ್ಕೆ ಸುಮಾ ತೊಂಡೆಕೆರೆ ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. 6ರಂದು ಸಂಜೆ 7ಕ್ಕೆ ಯುವ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. 7ರಂದು ಸಂಜೆ 7ಕ್ಕೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. 8ರಮದು ಮಧ್ಯಾಹ್ನ 2 ಕ್ಕೆ ಮಹಾಪೂಜೆ, ಭಜನೆ, ಫಲಾವಳಿ ಲೀಲಾವು, 4.30ಕ್ಕೆ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ತಿಳಿಸಿದ್ದಾರೆ.