ಉಗರಗೋಳ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಗುರುವಾರ ಜರುಗಿದ ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರ ದಂಡು ಹರಿದುಬಂದಿತ್ತು.
ಯಲ್ಲಮ್ಮ ದೇವಿಗೆ ನಸುಕಿನ ಜಾವ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇಡೀ ದೇವಾಲಯಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ಯಲ್ಲಮ್ಮದೇವಿಗೆ ಸಾಮೂಹಿಕವಾಗಿ ಪರಡಿ ತುಂಬಿ, ಭಕ್ತಿ ಸಮರ್ಪಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಕರ್ನಾಟಕದಿಂದ ಲಕ್ಷಾಂತರ ಭಕ್ತರು ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೋಗುತ್ತಾರೆ. ಮಹಾರಾಷ್ಟ್ರದಿಂದಲೂ ಅಸಂಖ್ಯಾತ ಭಕ್ತರು ಯಲ್ಲಮ್ಮ ಸನ್ನಿಧಿಗೆ ಬರುತ್ತಾರೆ. ನಮಗೆ ದೇವರು ಮುಖ್ಯವೇ ಹೊರತು, ಯಾವುದೇ ಭಾಷೆ, ಗಡಿಯಲ್ಲ. ಧಾರ್ಮಿಕ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂದರು.
ಗುಡ್ಡದಲ್ಲಿ ಭಕ್ತರು ಪ್ರತ್ಯೇಕವಾಗಿ ಪರಡಿ ತುಂಬಿ, ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಈಗ ದೇವಸ್ಥಾನ ವತಿಯಿಂದಲೇ ಸಾಮೂಹಿಕವಾಗಿ ಪರಡಿ ತುಂಬುವ ಕಾರ್ಯಕ್ಕೆ ಚಾಲನೆ ನೀಡಿರುವುದು ಶ್ಲಾಘನೀಯ. ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಬಾರಿ ಮುಂಗಾರು ಹಂಗಾಮಿನಲ್ಲಿ ವರುಣ ಕೈಕೊಟ್ಟಿದ್ದರಿಂದ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಯಲ್ಲಮ್ಮ ದೇವಿ ಕಪೆಯಿಂದ ಉತ್ತಮ ಮಳೆಯಾಗಿ, ರೈತರ ಬಾಳು ಹಸನಾಗಲಿ ಎಂದು ಆಶಿಸಿದರು.
ಅರ್ಚಕರಾದ ಪಂಡಿತ ಯಡಿಯೂರಯ್ಯ, ಏಕನಗೌಡ ಮುದ್ದನಗೌಡ್ರ, ಪರಸನಗೌಡ ರೇಣ್ಕಿಗೌಡ್ರ ವೈದಿಕತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಬೆಟಸೂರ ಮಠದ ಅಜ್ಜಯ್ಯ ಶ್ರೀ, ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ಅಧೀಕ್ಷಕ ಅರವಿಂದ ಮಾಳಗೆ, ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ.ಕಾಳಪ್ಪನವರ, ಎಂ.ವಿ.ಮುಳ್ಳೂರ, ಎಸ್.ಎಲ್.ಯಲಿಗಾರ, ಸಿ.ಎನ್. ಕುಲಕರ್ಣಿ, ಗದಿಗೆಪ್ಪ ಗಡೆಕರ, ಡಿ.ಆರ್. ಚವ್ಹಾಣ, ರಾಜು ಬೆಳವಡಿ, ಎಎಸ್‌ಐ ಎಸ್.ಆರ್.ಗಿರಿಯಾಲ ಇತರರು ಇದ್ದರು.