ಜಿಲ್ಲೆ

ಯಲ್ಲಮ್ಮನ ಹುಂಡಿಯಲ್ಲಿ 1.96 ಕೋಟಿ ರೂ. ಸಂಗ್ರಹ

ಉಗರಗೋಳ: ಸಮೀಪದ ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ದಾಖಲೆ ಪ್ರಮಾಣದ 1.96 ಕೋಟಿ ರೂ. ಕಾಣಿಕೆ ಸಂಗ್ರಹಗೊಂಡಿದೆ. 1.71 ಕೋಟಿ ರೂ. ನಗದು. 20.44 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4.44 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಇದರಲ್ಲಿ ಸೇರಿವೆ.

ಪ್ರತಿ ವರ್ಷ ಈ ಅವಧಿಯಲ್ಲಿ ಎಣಿಕೆ ನಡೆದಾಗ 1 ಕೋಟಿಯಿಂದ 1.5 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಆದರೆ, ರಾಜ್ಯಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ್ದರಿಂದ ಗುಡ್ಡಕ್ಕೆ ಬರುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ತಿಳಿಸಿದ್ದಾರೆ.

ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ವೈ.ವೈ.ಕಾಳಪ್ಪನವರ, ಕೋಳ್ಳಪ್ಪಗೌಡ ಗಂದಿಗವಾಡ, ಬಾಳೇಶ ಅಬ್ಬಾಯಿ, ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆಯ ಶೀಲಾ, ಎಂ.ಎಸ್.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಹವಾಲ್ದಾರ್ ಆನಂದ ಗೋರವನಕೊಳ್ಳ, ಡಿ.ಡಿ.ನಾಗನಗೌಡ್ರ, ದೇವಸ್ಥಾನ ಸಿಬ್ಬಂದಿ, ಯಲ್ಲಮ್ಮನಗುಡ್ಡದ ಕೆನರಾ ಬ್ಯಾಂಕ್ ಮತ್ತು ದೇವಸ್ಥಾನದ ಹೋಂ ಗಾರ್ಡ್ಸ್, ಅಧಿಕಾರಿಗಳು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.