ಜಿಲ್ಲೆ

ಯಲವಿಗಿಯಲ್ಲಿ ಅವೈಜ್ಞಾನಿಕ ಕೆಳಸೇತುವೆ

ವಿಜಯವಾಣಿ ವಿಶೇಷ ಸವಣೂರ

ತಾಲೂಕಿನ ಯಲವಿಗಿ ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ನಿರ್ವಿುಸಿರುವ ರೈಲ್ವೆ ಕೆಳ ಸೇತುವೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ವಾಹನ ಸಂಚಾರಕ್ಕೆ ಮೇಲ್ಸೇತುವೆ ನಿರ್ವಿುಸಬೇಕು ಹಾಗೂ ಯಲವಿಗಿ ರೈಲು ನಿಲ್ದಾಣವನ್ನು ಮೇಲ್ದಜೆಗೇರಿಸಬೇಕು ಎಂಬುದು ಸಾರ್ವಜನಿಕರ ಹಲವು ದಿನಗಳ ಬೇಡಿಕೆಯಾಗಿದೆ.

ಅಲ್ಪ ಮಳೆಯಾದರೂ ಯಲವಿಗಿ ಗ್ರಾಮದ ರಾಜ್ಯ ಹೆದ್ದಾರಿ 6ರಲ್ಲಿ (ಸವಣೂರ-ಗದಗ ರಸ್ತೆ) ನಿರ್ವಿುಸಿರುವ (ರೈಲ್ವೆ ಗೇಟ್ ನಂ. 26ಬಿ) ಕೆಳಸೇತುವೆಯಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತದೆ. ಇದರಿಂದಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ.

2019ರ ಅಕ್ಟೋಬರ್​ನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಸೇತುವೆಯ ಕೆಳಭಾಗದಲ್ಲಿ ನೀರು ನಿಂತಿದ್ದರಿಂದ ಇಳಕಲ್- ಕಾರವಾರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಹಲವು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು. ಈ ವೇಳೆ ಮಾಹಿತಿ ಇಲ್ಲದ ಪ್ರಯಾಣಿಕರು ಯಲವಿಗಿ ರಸ್ತೆ ಮೂಲಕ ತೆರಳಲು ಮುಂದಾಗಿದ್ದರು. ಖಾಸಗಿ ಬಸ್ ಒಂದು ಸೇತುವೆ ಕೆಳಗಿನ ನೀರಿನಲ್ಲಿ ಮುಳುಗಿ 34 ಪ್ರಯಾಣಿಕರು ಅಪಾಯಕ್ಕೆ ಸಿಲುಕಿದ್ದರು. ಕಾರು ಹಾಗೂ ದ್ವಿಚಕ್ರ ವಾಹನಗಳು ಮುಳುಗುವ ಹಂತಕ್ಕೆ ತಲುಪಿದ್ದವು. ಅದೃಷ್ಟವಶಾತ್ ಸ್ಥಳೀಯರು ಹಾಗೂ ಅಗ್ನಿ ಶಾಮಕದಳದ ಸಹಕಾರದಿಂದ 50ಕ್ಕೂ ಹೆಚ್ಚು ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಯಿತು.

ರೈಲ್ವೆ ಸೇತುವೆಯ ಕೆಳ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗಲೆಂದು ದ್ವಿಪಥ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಆದರೆ, ರಸ್ತೆ ನಿರ್ವಣದ ಸ್ಥಳ ತಗ್ಗು ಪ್ರದೇಶವಾಗಿದ್ದು, ಸುತ್ತಲಿನ ಜಮೀನುಗಳಿ ನೀರು ಹರಿದು ಬಂದು ಇಲ್ಲಿ ಸಂಗ್ರಹಗೊಳ್ಳುತ್ತದೆ. ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಇದರಿಂದ 2-3 ದಿನ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ರೈತರ ಜಮೀನುಗಳಿಗೆ ಹೋಗಲು, ಲಕ್ಷೆ್ಮೕಶ್ವರ, ಆಸ್ಪತ್ರೆ, ಶಾಲಾ, ಕಾಲೇಜ್​ಗಳಿಗೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತದೆ. ಬಲಪಥದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದ ತಗ್ಗು ನಿರ್ವಣವಾದ್ದರಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈಗ ಒಂದೇ ಕಡೆ ವಾಹನ ಸಂಚರಿಸುತ್ತಿದ್ದು, ಜೋರು ಮಳೆಯಾದಲ್ಲಿ ಇಲ್ಲಿಯೂ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡುವಂತಾಗುತ್ತದೆ. ಹೀಗಾಗಿ ವಾಹನ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.

ರಾಜ್ಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ವಿುಸುವಂತೆ ಒತ್ತಾಯಿಸಿ ಕೇಂದ್ರ, ರಾಜ್ಯ ರೈಲ್ವೆ ಸಚಿವರು, ಸಂಸದರಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನ ಕಂಡು ಬಂದಿಲ್ಲ ಎಂದು ರತ್ನ ಭಾರತ ರೈತ ಸಮಾಜದ ತಾಲೂಕು ಅಧ್ಯಕ್ಷ ರಾಮಣ್ಣ ಮೂಲಿಮನಿ, ಸಾಮಾಜಿಕ ಚಿಂತಕ ಡಾ. ಪ್ರಸನ್ನಕುಮಾರ ರಾಯಚೂರ ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತಮ ಆದಾಯ ಇರುವ ಯಲವಿಗಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುತ್ತಿಲ್ಲ. ರಾಜ್ಯ ಹೆದ್ದಾರಿಗೆ ಈ ಮೊದಲು ನಿರ್ವಿುಸಿದ್ದ ಕೆಳ ಸೇತುವೆ ಹಾಗೂ ರಸ್ತೆ ಅವೈಜ್ಞಾನಿಕವಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ, ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಈಗಲಾದರೂ ಸಮಸ್ಯೆ ಬಗೆಹರಿಸಲಿ.| ರುದ್ರಮುನಿ ಹಿರೇಮಠ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಉಪಾಧ್ಯಕ್ಷ