ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಯಲಗತವಳ್ಳಿ ಗ್ರಾಮದಲ್ಲಿ 6 ದಿನಗಳ ದೇವಮ್ಮ ಜಾತ್ರಾ ಮಹೋತ್ಸವ ಮತ್ತು ಬಂಡಿಹಬ್ಬಕ್ಕೆ ಶನಿವಾರ ರಾತ್ರಿ ತೆರೆ ಬಿತ್ತು. ಗ್ರಾಮದೇವತೆ ಉತ್ಸವ ಸಡಗರ, ಸಂಭ್ರಮಗಳಿಂದ ನೆರವೇರಿದ್ದು ಗ್ರಾಮಸ್ಥರಲ್ಲಿ ಧನ್ಯತೆ ಮೂಡಿಸಿತು. ಹಬ್ಬದ ಹಿನ್ನ್ನೆಲೆಯಲ್ಲಿ ಊರಿನಲ್ಲಿ ಸಡಗರದ ವಾತಾವರಣ ಮನೆ ಮಾಡಿತ್ತು.
ಬಂಡಿಹಬ್ಬದ ಅಂಗವಾಗಿ 22ರಂದು ರಂಗದ ಹಬ್ಬ ನೆರವೇರಿತು. ಅಂದು ಗ್ರಾಮಸ್ಥರೆಲ್ಲರೂ ದೇವಸ್ಥಾನದ ಬಳಿ ಸೇರಿ ಕುಣಿದು ಸಂಭ್ರಮಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. 23ರಂದು ಮಾರಿಹಬ್ಬ ನಡೆಯಿತು. ಗ್ರಾಮಸ್ಥರು ಮಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. 24ರಂದು ಬಸವಣ್ಣನವರ ಮೆರವಣಿಗೆ, ವೀರಗಾಸೆ ಕುಣಿತ ಜನಮನ ಸೆಳೆಯಿತು. 25ರಂದು ಸುಂಕದ ಹಬ್ಬವನ್ನು ಆಚರಿಸಲಾಯಿತು. 26ರಂದು ಬಂಡಿ ಜಾತ್ರೆ ಮಹೋತ್ಸವದ ಹಿನ್ನೆಲೆ ಗ್ರಾಮವನ್ನು ತಳಿರು- ತೋರಣ, ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು. ಭೈರವೇಶ್ವರ ಮತ್ತು ದೇವಮ್ಮ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.