ಚಿಕ್ಕಮಗಳೂರು: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಸವಣ್ಣ ಅವರ ಬಗ್ಗೆ ನೀಡಿದ ಹೇಳಿಕೆಗೆ ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ತೀವ್ರ ಖಂಡನೆ ವ್ಯಕ್ತಪಡಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಇದನ್ನು ಸಂಘ ಪರಿವಾರ ಹುನ್ನಾರದಿಂದ ಹೇಳಿಸಿದ್ದು. ಈ ಬಗ್ಗೆ ಯಾವುದೇ ಬಿಜೆಪಿ ಶಾಸಕರು ಮಾತನಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಯತ್ನಾಳ್ ಅವರನ್ನು ತೆರೆಮರೆಯಲ್ಲಿ ಕುಳಿತು ಯಾರೋ ಆಡಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಆದರೆ ಬಿಜೆಪಿ, ಸಂಘ ಪರಿವಾರದಂತಹ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡದಿಂದ ಈ ರೀತಿ ಹೇಳಿಕೆಗಳನ್ನು ಯತ್ನಾಳ ಮೂಲಕ ಹೇಳಿಸುತ್ತಿದ್ದಾರೆ. ಈ ತಕ್ಷಣ ಯತ್ನಾಳ್ ಕನ್ನಡದ ಜನತೆಯ ಕ್ಷಮೆ ಯಾಚಿಸಬೇಕು. ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.