ಹಾಸನ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸೀಟು ಗಳಿಸಿದರೆ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುತ್ತಾರೆಂಬ ಒಪ್ಪಂದ ಮೊದಲೇ ಆಗಿದೆಯಾ ಎಂಬುದನ್ನು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕೆಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದರು.
ನಗರದ ಎನ್‌ಆರ್ ವೃತ್ತದಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಬುಧವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಸ್ಥಳ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಬಾರದೆ ಇದ್ದರೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಕುರಿತು ಚರ್ಚೆ ಆಗಿರಬಹುದು. ಆ ಕಾರಣದಿಂದಲೇ 3 ಉಪಮುಖ್ಯಮಂತ್ರ ಹುದ್ದೆಯ ಸೃಷ್ಟಿಯ ಮಾತುಗಳು ಆಗಾಗ ತೇಲಿಬರುತ್ತವೆ. ಕಾಂಗ್ರೆಸ್‌ಗೆ ಸೋಲಿನ ಭೀತಿ ಈಗಲೇ ಕಾಡುತ್ತಿದೆ. ಸಿದ್ದರಾಮಯ್ಯ ಅವರಿಗೆ ಟಾರ್ಗೆಟ್ ಕೊಟ್ಟು ಮುಖ್ಯಮಂತ್ರಿ ಸ್ಥಾನ ನೀಡಿದ್ದಾರಾ ಅಥವಾ ಜನಪ್ರಿಯ ನಾಯಕ ಎಂಬ ಕಾರಣಕ್ಕೆ ಕೊಟ್ಟಿದ್ದಾರಾ ಎಂಬುದು ಬಹಿರಂಗವಾಗಬೇಕು ಒತ್ತಾಯಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ರಾಜಕೀಯ ಟಾಸ್ಕ್ ನೀಡಿದ್ದರೆ ಅದನ್ನು ಬಹಿರಂಗಪಡಿಸಲಿ. ಸುಖಾ ಸುಮ್ಮನೆ ರಾಜ್ಯದ ಜನತೆಗೆ ಅನ್ಯಾಯ ಮಾಡಿ ಅಧಿಕಾರ ನಡೆಸುವುದು ಒಳ್ಳೆಯದಲ್ಲ ಎಂದು ಟಾಂಗ್ ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ಅನುದಾನ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಾಕಷ್ಟು ಸಲ ಹೇಳಿದ್ದಾರೆ. ಈ ಬಾರಿ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿ ಆಗುತ್ತಾರೆಂದು ಕಾಂಗ್ರೆಸ್‌ನ ನಾಯಕರೇ ಹೇಳುತ್ತಿದ್ದಾರೆ. ಪ್ರತಿಪಕ್ಷದ ಕಾರ್ತಿಕ್ ಚಿದಂಬರಂ ಹಾಗು ಪ್ರಶಾಂತ್ ಕಿಶೋರ್ ಅವರೇ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಈಗಲೇ ಸೋಲಿನ ಭೀತಿ ಕಾಡುತ್ತಿದೆ ಎಂದರು.
ಕೇಂದ್ರದಿಂದ ಅಧಿಕ ಅನುದಾನ:
ಹಾಸನ ಜಿಲ್ಲೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ 9 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಆದರೆ ರಾಜ್ಯ ಸರ್ಕಾರದವರು ಮಾತ್ರ ಯಾವುದಕ್ಕೂ ದುಡ್ಡಿಲ್ಲ ಎನ್ನುತ್ತಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಮನವಿ ಜೊತೆಗೆ ನಾವು ಭೇಟಿ ನೀಡಿದರೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಿಲ್ಲೆಯ ರಸ್ತೆ ಕಾಮಗಾರಿಗೆ 6.50 ಸಾವಿರ ಕೋಟಿ ರೂ. ದೊರೆತಿದೆ. ರೈಲ್ವೆ ಯೋಜನೆಗೆ 1987 ಕೋಟಿ ರೂ. ಸಿಕ್ಕಿದೆ. ಪಿಎಂಜಿಎಸ್‌ವೈ, ಜೆಜೆಎಂ ಹಾಗು ಇತರ ಕಾಮಗಾರಿ ಸೇರಿ ಹಾಸನ ಕ್ಷೇತ್ರಕ್ಕೆ ಒಂಬತ್ತು ಸಾವಿರ ಕೋಟಿ ರೂ. ಅನುದಾನ ಬಂದಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಹಿನ್ನಲೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕ್ಷೇತ್ರಗಳ ಸರ್ವೆಗೆ ಮುಂದಾಗಿದ್ದು, ಜ. 18ರಂದು ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನ 1.30ಕ್ಕೆ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಖಂಡರ ಸಭೆ ನಡೆಸಲಿದ್ದಾರೆ. ಆ ಬಳಿಕ ಸಕಲೇಶಪುರ ಹಾಗು ಹುಟ್ಟೂರು ಹರದನಹಳ್ಳಿಗೆ ಭೇಟಿ ನೀಡಲಿದ್ದಾರೆ. ಹಾಸನ ಮಾತ್ರವಲ್ಲದೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ದೊಡ್ಡಗೌಡರು ಪ್ರವಾಸ ಮಾಡಲಿದ್ದಾರೆಂದರು.
ಶೀಘ್ರದಲ್ಲೇ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ:
ಹಲವು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಮುಕ್ತಾಯಗೊಂಡು ಸಂಚಾರಕ್ಕೆ ಮುಕ್ತವಾಯಿತೆಂಬ ಆಶಾಭಾವ ಜನರಲ್ಲಿ ಮೂಡಿತ್ತು. ಆದರೆ, ಎರಡನೇ ಮೇಲ್ಸೇತುವೆ ಕಾಮಗಾರಿ ಇನ್ನು ನಡೆಯಬೇಕಿದೆ. ಆದರೆ, ಅಧರ್ಂಬರ್ಧ ಕಾಮಗಾರಿಯಾಗಿರುವುದರಿಂದ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ 48 ಕೋಟಿ ರೂ. ಪಡೆದು ಕೆಲಸ ಶುರು ಮಾಡಿರಿ ಎಂದರೆ ಅದಕ್ಕೂ ಸ್ಪಂದಿಸುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಅಷ್ಟೊಂದು ಅನುದಾನ ಇಲ್ಲವೆಂಬ ಉತ್ತರ ಬಂದಿದೆ. ಹೀಗಾಗಿ ತಾತ್ಕಾಲಿಕವಾಗಿ ಏಕಪಥ ರಸ್ತೆ ಸಂಚಾರಕ್ಕಾದರೂ ಅನುಮತಿ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ನಗರದ ರೈಲ್ವೆ ಮೇಲ್ಸೇತುವೆ ಹೆಚ್ಚುವರಿ ಕಾಮಗಾರಿಗೆ 48 ಕೋಟಿ ರೂ. ಅನುದಾನದ ಅವಶ್ಯಕತೆಯಿದ್ದು, ರಾಜ್ಯ ಸರ್ಕಾರ ಹಣ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಆರಂಭಿಸಲಾಗಿದ್ದ ಏಕಪಥ ಸಂಚಾರವನ್ನೂ ಜಿಲ್ಲಾಧಿಕಾರಿ ಬಂದ್ ಮಾಡಿದ್ದಾರೆಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದರು. ರಾಜ್ಯ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕಿರುವುದರಿಂದ ನಾವೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ಹಣ ಬಿಡುಗಡೆಗೆ ನೀತಿ ನಿಯಮಗಳಿರುವುದರಿಂದ ತಡವಾಗುತ್ತದೆ. ಹಾಗಾಗಿ ಶೀಘ್ರ ಸಂಚಾರ ಪ್ರಾರಂಭಿಸಲಾಗುವುದು. ಇದು ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಸಾರ್ವಜನಿಕರಿಗೆ ತೊಂದರೆ ನೀಡಬಾರದೆಂಬ ಕಾರಣಕ್ಕೆ ವಾಹನಗಳ ಓಡಾಡಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ರೈಲ್ವೆ ಇಲಾಖೆ ಹಿರಿಯ ಇಂಜಿನೀಯರ್ ನಾಗರಾಜು ಅವರೊಂದಿಗೆ ಸಂಸದರು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಸ್ಥಳೀಯರು ರಸ್ತೆ ಬಂದ್‌ನಿಂದ ಆಗುತ್ತಿರುವ ತೊಂದರೆ ಕುರಿತು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು.