ಬೇಲೂರು: ಯತಿ ಶ್ರೇಷ್ಠ ಶ್ರೀ ವಾದಿರಾಜರ ಜಯಂತಿ ಅಂಗವಾಗಿ ಬೇಲೂರು ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಹಯವದನಾಂಕಿತ 108 ಕೀರ್ತನೆಗಳ ಸಂಕೀರ್ತನಾ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀರಾಘವೇಂದ್ರ ಮಠದ ವ್ಯವಸ್ಥಾಪಕ ವೈದಿಕ ವಿದ್ವಾನ್ ಸುಧೀಂದ್ರಾಚಾರ್ ಉದ್ಘಾಟಿಸಿ ಮಾತನಾಡಿ, ವಾದಿರಾಜರು ಯತಿಯಾಗಿ ದಾಸ ಸಾಹಿತ್ಯಕ್ಕೆ ಮತ್ತು ವೈದಿಕತೆಗೆ ಹಾಗೂ ಕನ್ನಡ ಸಾರಸತ್ವ ಲೋಕಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಅಲ್ಲದೆ ಬಜನಾ ಮಂಡಳಿಯವರು ವಾದಿರಾಜರು ರಚಿಸಿದ ಕೀರ್ತನೆಗಳನ್ಮು ಹಾಡುವ ಮೂಲಕ ಅವರನ್ನು ಸ್ಮರಿಸುವಂತಹ ಕಾರ್ಯ ಶ್ಲಾಘನಿಯವಾಗಿದ್ದು, ಪ್ರತಿಯೊಬ್ಬರು ಯತಿ ಶ್ರೇಷ್ಟರ ಬಗ್ಗೆ ಹೆಚ್ಚಿನ ಅರಿವು ಪಡೆದು ಕೊಳ್ಳ ಬೇಕಿದೆ ಎಂದರು.
ಮಠದ ಸಂಚಾಲಕ ವಾಸುದೇವ ಧನ್ಯ ಮಾತನಾಡಿ, ವಾದಿರಾಜರು ಬೇಲೂರು ಪ್ರದೇಶದಲ್ಲಿ ಸಂಚರಿಸಿ ಕೆಲಕಾಲ ಉಳಿದುಕೊಂಡು, ಅಂದಿನ ದಿನಗಳಲ್ಲೆ ಹಲವರನ್ನು ಶಿಷ್ಯರನ್ನಾಗಿ ಪಡೆದಿದ್ದರು. ಶ್ರೀಚನ್ನಕೇಶವಸ್ವಾಮಿಯ ದರ್ಶನ ಪಡೆಯಲು ಅನೇಕ ಯತಿ ಶ್ರೇಷ್ಠರು ಬೇಲೂರಿಗೆ ಭೇಟಿ ನೀಡಿರುವುದು ನಮ್ಮೆಲ್ಲರಿಗೂ ಹೆಮ್ಮೆ ವಿಚಾರ ಎಂದರು.
ಪಟ್ಟಣದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಮಧ್ವಪತಿ ವಿಠಲ ಭಜನಾ ಮಂಡಳಿ ಮತ್ತು ವಿವಿಧ ಭಜನಾ ಮಂಡಳಿಗಳ ಸಹಯೋಗದೊಂದಿಗೆ ಕೀರ್ತನೆಗಳನ್ನು ಹಾಡಿದರು.