ಜಿಲ್ಲೆ

ಯಡಿಯೂರಪ್ಪನವರ ದೂರದೃಷ್ಟಿ ಫಲವಾಗಿ ಶಿಕಾರಿಪುರ ಸರ್ವತೋಮುಖ ಅಭಿವೃದ್ಧಿ: ಬಿ.ವೈ.ರಾಘವೇಂದ್ರ

ಶಿಕಾರಿಪುರ: ಯಡಿಯೂರಪ್ಪ ಅವರ ಜನಪರ ಕಾಳಜಿ ಮತ್ತು ದೂರದೃಷ್ಟಿಯ ಫಲವಾಗಿ ಶಿಕಾರಿಪುರ ತಾಲೂಕು ಸರ್ವತೋಮುಖ ಅಭಿವೃದ್ಧಿ ಆಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ತಾಲೂಕುಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶುಕ್ರವಾರ ಕಲ್ಯಾಣನಗರದಲ್ಲಿ ಅಮೃತ ನಗರೋತ್ಥಾನ ಯೋಜನೆಯ ನಾಲ್ಕನೆಯ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶಿಕಾರಿಪುರದ 36 ಸಾವಿರ ಜನಸಂಖ್ಯೆ ಇದ್ದು ಪ್ರತಿದಿನ 5.40 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಆದರೆ ಬಿಎಸ್‌ವೈ ಮುಂದಾಲೋಚನೆಯಿಂದ ಸುಮಾರು 7.5 ಲಕ್ಷ ನೀರು ಶೇಖರಿಸುವ ಓವರ್ ಹೆಡ್ ಟ್ಯಾಂಕರ್ ನಿರ್ಮಿಸಲಾಗಿದೆ ಎಂದರು.

45 ಕಿಮೀ ರಸ್ತೆ, 90 ಕಿಮೀ ಒಳಚರಂಡಿಯನ್ನು 30 ಕೋಟಿ ರೂ. ವೆಚ್ಚದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ಕಾರ್ಪೋರೇಷನ್‌ಗಳ ಆರ್ಥಿಕ ಸಬಲತೆಗಾಗಿ ಯಡಿಯೂರಪ್ಪ ಅವರು 2009ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸ್ಮಾರ್ಟ್‌ಸಿಟಿ ಕನಸು ಕಂಡು ಕಾರ್ಪೋರೇಷನ್‌ಗಳಿಗೆ 100 ಕೋಟಿ ರೂ., ಜಿಲ್ಲಾ ಕೇಂದ್ರಗಳಿಗೆ 40, ಪುರಸಭೆಗೆ 10 ಹಾಗೂ ಪಟ್ಟಣ ಪಂಚಾಯಿತಿಗಳಿಗೆ 5 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದರು. ಈಗಿನ ಮುಖ್ಯಮಂತ್ರಿಗಳು ಕೂಡ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದರಿಂದ ಸ್ಥಳೀಯ ಸಂಸ್ಥೆಗಳು ಉಸಿರಾಡುವಂತಾಗಿದೆ ಎಂದು ತಿಳಿಸಿದರು.

ಅಮೃತ್ ಯೋಜನೆಯಡಿಯಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಸಾಗರ, ಸೊರಬ, ಹೊಸನಗರ, ಶಿಕಾರಿಪುರ, ಶಿರಾಳಕೊಪ್ಪ ತೀರ್ಥಹಳ್ಳಿ, ಆನವಟ್ಟಿ, ಹೊಳೆಹೊನ್ನೂರು ಮತ್ತು ಜೋಗ- ಕಾರ್ಗಲ್ಗಳಿಗೆ ಕುಡಿಯುವ ನೀರಿಗೆ 179 ಕೋಟಿ ರೂ., ಉದ್ಯಾನ ಅಭಿವೃದ್ಧಿ ಗೆ 21.53 ಕೋಟಿ, ಮತ್ತು ಕೆರೆಗಳ ಅಭಿವೃದ್ಧಿಗೆ 58.9 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿ ಗೆ ಸಹಕಾರಿಯಾಗಿದೆ. ಇದು ನಗರೋತ್ಥಾನ ಯೋಜನೆಯ ಕಾಯಕಲ್ಪ ಎಂದು ಹೇಳಿದರು.