ಜಿಲ್ಲೆ

ಯಡಿಯೂರಪ್ಪ ಅಧಿಕಾರಾವಧಿ ಜನಪರ ಯೋಜನೆಗಳು ಜಾರಿ

ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರುವುದಕ್ಕಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಹೇಳಿದರು.

ಯಡಿಯೂರಪ್ಪ ಅವರ 82ನೇ ಜನ್ಮ ದಿನದ ಅಂಗವಾಗಿ ನಗರದ ಆನೆಬಾಗಿಲು ಬಳಿಯ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಗು ರುವಾರ ಪಕ್ಷದಿಂದ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಬಳಿಕ ಮಾತನಾಡಿದರು.

ಪಕ್ಷದ ಹಿರಿಯ ಮುತ್ಸದ್ಧಿ, ಹುಟ್ಟು ಹೋರಾಟಗಾರ, ಅಭಿವೃದ್ಧಿ ಹರಿಕಾರ ಯಡಿಯೂರಪ್ಪ ಅವರಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಸಾಧ್ಯವಾಗಿದೆ. ಪಕ್ಷವನ್ನು ಗ್ರಾಮ ಮಟ್ಟದಲ್ಲೂ ನೆಲೆ ನಿಲ್ಲುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ರೈತರ ಪರ ಹೋರಾಟದ ಮೂಲಕ ರೈತ ನಾಯಕರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ನಾಡಿನ ಜನರಿಗೆ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. 45 ವರ್ಷಗಳಿಗೂ ಅಧಿಕ ಕಾಲ ಸಕ್ರಿಯ ರಾಜಕಾರಣದಲ್ಲಿದ್ದಾರೆ. ದಲಿತ, ಹಿಂದುಳಿದ ವರ್ಗ,ಬಡವರು ಸೇರಿ ಎಲ್ಲರ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಪ್ರತಿ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಭಾಗ್ಯಲಕ್ಷ್ಮೀ, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ, ಕಿಸಾನ್ ಸಮ್ಮಾನ್, ರೈತ ವಿದ್ಯಾರ್ಥಿ ವೇತನ ಇತ್ಯಾದಿ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಎಂದರು.

ಪಕ್ಷದ ಮುಖಂಡರಾದ ಮಾಧುರಿ ಗಿರೀಶ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಶಂಭು, ಕವನಾ, ಅರುಣಕುಮಾರಿ, ಯಶವಂತ, ವಿರೇಶ್ ಜಾಲಿಕಟ್ಟೆ, ರವಿ, ಶಿವಣ್ಣಾಚಾರ್, ರಾಜಕುಮಾರ್, ಶಂಭು ಮತ್ತಿತರರು ಇದ್ದರು.

ಬಯಲುಸೀಮೆ ನೀರಾವರಿಗೆ ಬಿಎಸ್‌ವೈ ಕೊಡುಗೆ ದೊಡ್ಡದು

ಹಿರಿಯೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ 82 ನೇ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಗುರುವಾರ ಶ್ರೀ ತೇರುಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿದರು.

ಇದಕ್ಕೂ ಮುನ್ನ ನಗರದ ಬಿಜೆಪಿ ಕಚೇರಿಯಲ್ಲಿ ಜನ್ಮದಿನ ಆಚರಿಸಿದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಮಾತನಾಡಿ, ಯಡಿಯೂರಪ್ಪ 3 ಬಾರಿ ಸಿಎಂ ಆಗಿ ಉತ್ತಮ ಕಾರ್ಯಕ್ರಮ ನೀಡಿದ್ದಾರೆ. ಭದ್ರಾಮೇಲ್ದಂಡೆ ಯೋಜನೆಗೆ ಚಾಲನೆ, ಧರ್ಮಪುರ ಏತ ನೀರಾವರಿ ಯೋಜನೆ ಸಾಕಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಯಲುಸೀಮೆ ನೀರಾವರಿಗೆ ಅವರ ಕೊಡುಗೆ ಸ್ಮರಣೀಯ ಎಂದರು.

ಪಕ್ಷದ ಹಿರಿಯ ಮುಖಂಡ ಎಂ.ಎಸ್. ರಾಘವೇಂದ್ರ ಮಾತನಾಡಿ, ಬಿಎಸ್‌ವೈ ಪ್ರಶ್ನಾತೀತ ಹಾಗೂ ಕರುನಾಡಿನ ಸಮಸ್ತ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ನಾಯಕ ಎಂದು ಬಣ್ಣಿಸಿದರು.

ಮುಖಂಡ ಕೇಶವಮೂರ್ತಿ ಮಾತನಾಡಿ, ಎಲ್ಲ ಜಾತಿ, ಮತಗಳ ಸಮುದಾಯಗಳಿಗೆ ಅನುದಾನ ನೀಡಿ, ರಾಜ್ಯದಲ್ಲಿ ಸರ್ವಸ್ಪರ್ಶಿ ಆಡಳಿತ ನೀಡಿ ಕನ್ನಡಿಗರ ಹೃದಯಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಬಿಎಸ್‌ವೈ ಜನ್ಮ ದಿನದ ನಿಮಿತ್ತ ತಾಲೂಕಿನ ಭೀಮನಬಂಡೆ ಶುಭೋದಯ ಶೈಕ್ಷಣಿಕ ಮತ್ತು ವೃದ್ಧಾಶ್ರಮದ ನಿರಾಶ್ರಿತರಿಗೆ ಹಣ್ಣು, ಹಾಲು ವಿತರಿಸಲಾಯಿತು. ಅಭಿಮಾನಿಗಳಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ನಗರ ಸಭೆ ಮಾಜಿ ಅಧ್ಯಕ್ಷೆ ಮಂಜುಳಾ, ಮುಖಂಡರಾದ ಎಂ.ವಿ. ಹರ್ಷ, ವಿಶ್ವನಾಥ್, ತಾಹೀರಾಬಾನು, ಸಿದ್ದಮ್ಮ, ಶಂಕರ್‌ಸಿಂಗ್, ಉಮೇಶ್, ಸಿ.ಎಂ. ಸ್ವಾಮಿ, ವೆಂಕಟೇಶ್, ಹರೀಶ್, ಏಕಾಂತ, ಯೋಗೇಶ್, ನಿತಿನ್ ಗೌಡ, ಹನುಮಂತ, ಶಿವು ಇತರರಿದ್ದರು.

ಬಿಎಸ್‌ವೈ ಪರಿಶ್ರಮದಿಂದ ಬಿಜೆಪಿ ದೊಡ್ಡ ಶಕ್ತಿ

ಚಳ್ಳಕೆರೆ: ಮಹಿಳಾ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ ಜಾರಿ ಮಾಡಿದ ಕೀರ್ತಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ. ಜಯಪಾಲಯ್ಯ ಹೇಳಿದರು.

ಯಡಿಯೂರಪ್ಪ ಅವರ ಜನ್ಮ ದಿನದ ಪ್ರಯುಕ್ತ ನಗರದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ಮಾತನಾಡಿದರು.

ಬಿಎಸ್‌ವೈ ಪರಿಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಅವರ ಆಡಳಿತಾವಧಿಯಲ್ಲಿ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರ ಜೀವನ ಸುಧಾರಣೆಗೆ ಅನೇಕ ಯೋಜನೆ ಜಾರಿ ಮಾಡಿದ್ದರು ಎಂದು ಸ್ಮರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್, ಮುಖಂಡರಾದ ಬಿ.ಎಸ್. ಶಿವಪುತ್ರಪ್ಪ, ಬಾಳೆಕಾಯಿ ರಾಮ್‌ದಾಸ್, ದಿನೇಶ್‌ರೆಡ್ಡಿ, ಕರೀಕರೆ ತಿಪ್ಪೇಸ್ವಾಮಿ, ಪಾತಣ್ಣ, ಹರೀಶ್‌ಕುಮಾರ್ ಮತ್ತಿತರರಿದ್ದರು.

ಬಿಜೆಪಿ ಅಧಿಕಾರಕ್ಕೆ ತಂದ ಛಲದಂಕ ಮಲ್ಲ

ಮೊಳಕಾಲ್ಮೂರು: ಕರ್ನಾಟಕದಲ್ಲಿ ಬಿಜೆಪಿ ಸಂಘಟಿಸಿ ಅಧಿಕಾರಕ್ಕೆ ತಂದ ಛಲದಂಕ ಮಲ್ಲ ಬಿ.ಎಸ್. ಯಡಿಯೂರಪ್ಪ ಎಂದು ಪಕ್ಷದ ಮಂಡಲ ಮಾಜಿ ಅಧ್ಯಕ್ಷ ಡಾ. ಪಿ.ಎಂ. ಮಂಜುನಾಥ ಗುಣಗಾನ ಮಾಡಿದರು.

ಮಾಜಿ ಸಿಎಂ ಬಿಎಸ್‌ವೈ ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಗುರುವಾರ ಪಕ್ಷದ ವತಿಯಿಂದ ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಎಸ್‌ವೈ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ತಳಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಬಿಜೆಪಿ ಅಧಿಕಾರಾವಧಿಯಲ್ಲಿ ಅನೇಕ ಕಲ್ಯಾಣ ಕಾರ್ಯಗಳು ಮನೆ ಮಾತಾಗಿವೆ. ಅವರ ರಾಜಕೀಯ ಸೇವೆ ನಾಡಿಗೆ ಅಗತ್ಯವಿದೆ. ಪರಮಾತ್ಮ ಅವರಿಗೆ ಇನ್ನಷ್ಟು ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಕೆ.ಟಿ. ರಾಮರಡ್ಡಿ, ಪಪಂ ಉಪಾದ್ಯಕ್ಷ ಕೆ. ತಿಪ್ಪೇಸ್ವಾಮಿ, ಸಿದ್ದಣ್ಣ, ಟಿ. ರವಿಕುಮಾರ, ವಿನಯ್‌ಕುಮಾರ, ಚಂದ್ರಶೇಖರಗೌಡ್ರು, ಡಿ.ಎಂ. ಈಶ್ವರಪ್ಪ, ಪ್ರಭಾಕರ, ಕೆ. ತಿಪ್ಪೇಸ್ವಾಮಿ, ಸಿದ್ಧಾರ್ಥ, ಭೀಮಣ್ಣ, ಕಾರ್ಯಕರ್ತರು ಇದ್ದರು.