ಜಿಲ್ಲೆ

ಯಜ್ಞ ಧೂಮದಿಂದ ಪರಿಸರ ಶುದ್ಧ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ದೇಶದ ಅಭಿವೃದ್ಧಿ ಪಥವನ್ನು ನಿರ್ಣಯಿಸುವ ಕಾಲದಲ್ಲಿ ಸಂಸ್ಕೃತ ವಾšಯದಲ್ಲಿ ಅಡಗಿರುವ ಸಂಸ್ಕೃತಿ ಸಾರವನ್ನು ಪರಾಮಶಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಸರಣಿ ಆನ್​ಲೈನ್ ಉಪನ್ಯಾಸ ಮಾಲೆಯಲ್ಲಿ ‘ಸಂಸ್ಕೃತ ಮತ್ತು ಪರಿಸರ’ ವಿಷಯದ ಕುರಿತು ಶುಕ್ರವಾರ ಶೀಗಳು ಉಪನ್ಯಾಸ ನೀಡಿದರು. ನಮ್ಮ ದೇಶದ ಅಭಿವೃದ್ಧಿ ಚಿಂತನ ಪಥವು ಇತರ ದೇಶಗಳಿಗಿಂತ ಭಿನ್ನವಾಗಿದೆ. ಸಂಸ್ಕೃತ ವಾšಯದ ಆಧಾರ ಭೂಮಿಯಾಗಿರುವ ವೇದವು ಅನೇಕ ವಿಧವಾದ ಯಜ್ಞಗಳನ್ನು ವಿಧಿಸಿದೆ. ಈ ಯಜ್ಞಗಳಿಂದ ಉತ್ಪನ್ನವಾದ ಧೂಮರಾಶಿಯು ಪರಿಸರವನ್ನು ಶುದ್ಧಿಗೊಳಿಸುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಯಾವುದೇ ಯಜ್ಞವಿರಲಿ ಅದರ ಧೂಮದಿಂದ ಪರಿಸರವು ಕಲುಷಿತವಾಯಿತು ಎಂಬುದನ್ನು ನಾವಿನ್ನೂ ಕೇಳಿಲ್ಲ. ಪರಿಸರ ಪೂರಕವಾದ ಭಾರತೀಯ ಯಜ್ಞ ಪ್ರಧಾನ ಸಂಸ್ಕೃತಿಗೆ ಸಂಸ್ಕೃತವೇ ಆಧಾರ ಸ್ತಂಭವಾಗಿದೆ ಎಂದರು.

ಪರಿಸರದ ಕುರಿತಾಗಿ ಅಪಾರ ಕಾಳಜಿಯನ್ನು ತೋರುವ ಅನೇಕ ಗ್ರಂಥಗಳನ್ನು ಕಾಣಬಹುದು. ಪರಾಶರ ಸ್ಮತಿಯಲ್ಲಿ ಮರಗಳನ್ನು ಕಡಿದರೆ ನೀಡಬೇಕಾದ ದಂಡದ ಕುರಿತು ವಿವರಣೆಯೂ ಇದೆ. ಸಂಸ್ಕೃತ ವಾšಯವೇ ಅತ್ಯಂತ ಪ್ರಾಚೀನವಾದ ಪರಿಸರ ಶಾಸ್ತ್ರವಾಗಿದೆ. ಇಲ್ಲಿರುವ ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ ಯಾವುದರಲ್ಲಿಯೂ ಪರಿಸರಕ್ಕೆ ವಿರುದ್ಧವಾದ ಅಂಶಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಇಂದು ಅನೇಕ ಪರಿಸರ ವಿರೋಧಿ ಯೋಜನೆಗಳು ಬರುತ್ತಿವೆ ಎಂದ ಶ್ರೀಗಳು, ನದಿಗಳ ದಿಕ್ಕನ್ನು ಬದಲಿಸಿ ಅನೇಕ ನದಿಗಳನ್ನು ಒಂದಾಗಿ ಬೆಸೆಯಲಾಗುತ್ತಿದೆ. ಉಪನಿಷತ್ತಿನಲ್ಲಿ ನದಿಗಳು ಹರಿಯುವ ದಿಕ್ಕನ್ನು ಸೂಚಿಸಲಾಗಿದೆ. ಕೆಲವು ನದಿಗಳು ಪೂರ್ವಾಭಿಮುಖವಾಗಿ ಮತ್ತೆ ಕೆಲವು ಪಶ್ಚಿಮಾಭಿಮುಖವಾಗಿ ಹರಿಯುತ್ತವೆ. ಅವುಗಳ ಆ ರೀತಿಯ ಹರಿವಿಗೆ ಭಗವಂತನ ಪ್ರೇರಣೆಯೇ ಕಾರಣ. ಅದನ್ನು ಧಿಕ್ಕರಿಸಿ ಪರಿವರ್ತನೆ ಮಾಡುವ ಅಧಿಕಾರ ಮನುಷ್ಯನಿಗಿಲ್ಲ. ಆದಿಭೌತಿಕ ಆವರಣಕ್ಕೆ ಸೇರುವ ಪರಿಸರದ ವಿನಾಶಕ್ಕೆ ಆದಿದೈವಿಕ ಆವರಣದ ಉಪೇಕ್ಷೆಯೇ ಕಾರಣವಾಗಿದೆ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಡಾ.ವಿ. ಗಿರೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್.ಜಿ. ಹೆಗಡೆ ಭಟ್ರಕೇರಿ, ವಿದ್ವಾನ್ ಜಿ.ಎಲ್. ಭಟ್ಟ ಉಮ್ಮಚಗಿ ಉಪಸ್ಥಿತರಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ.ಪ್ರಕಾಶ ವಾಗೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವತೆಗಳನ್ನು ಉಪೇಕ್ಷೆ ಮಾಡಿದಂತೆ ಪರಿಸರವು ಕೆಡುತ್ತ ಹೋಗುತ್ತದೆ. ಆದ್ದರಿಂದ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಸಮೃದ್ಧವಾದ ಸಂಸ್ಕೃತ ಸಾಹಿತ್ಯವನ್ನು ಅವಲೋಕಿಸುವುದು ಅತ್ಯಂತ ಅವಶ್ಯವಾಗಿದೆ. | ಸ್ವರ್ಣವಲ್ಲೀ ಸ್ವಾಮೀಜಿ