ಬೇಲೂರು ಪಟ್ಟಣ ಸಮೀಪದ ಯಗಚಿ ಜಲಾಶಯದಿಂದ ಐದು ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಸಲಾಗುತ್ತಿರುವುದು. 
ಜಿಲ್ಲೆ

ಯಗಚಿಯಿಂದ ನದಿಗೆ 1 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು

ಬೇಲೂರು: ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಗಚಿ ಜಲಾಶಯ ಮತ್ತೆ ಭರ್ತಿಯಾಗಿದ್ದು, ಐದು ಕ್ರಸ್ಟ್ ಗೇಟ್‌ಗಳ ಮೂಲಕ 1 ಸಾವಿರ ಕ್ಯೂಸೆಕ್‌ಗೂ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಯಗಚಿ ಜಲಾಶಯ ಯೋಜನಾ ಉಪ ವಿಭಾಗದ ಎಇಇ ರಾಮಕೃಷ್ಣ ತಿಳಿಸಿದರು.

ಯಗಚಿ ಜಲಾಶಯದಿಂದ ಸೋಮವಾರ ನದಿಗೆ ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಹರಿಸಲು ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಯಗಚಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೆಚ್ಚುವರಿ ನೀರು ಹರಿದು ಬರುತ್ತಿದೆ. ಕಳೆದ ಒಂದು ವಾರದಿಂದ 300 ರಿಂದ 500 ಕ್ಯೂಸೆಕ್‌ಗಳ ತನಕ ನದಿಗೆ ನೀರನ್ನು ಬಿಡಲಾಗುತ್ತಿತ್ತು. ಆದರೆ ಭಾನುವಾರದಿಂದ ಜಲಾಶಯಕ್ಕೆ 1 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇರುವ ಕಾರಣ ಎರಡು ದಿನದಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜತೆಗೆ ಎಡದಂಡೆ ನಾಲೆ ಮೂಲಕ 150 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ ಎಂದರು.