ಬೇಲೂರು: ಪಟ್ಟಣದ ಯಗಚಿ ಹಳೇ ಸೇತುವೆ ಉಳಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಪಟ್ಟಣದ ಹಳೇ ಯಗಚಿ ಸೇತುವೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಯಗಚಿ ಸೇತುವೆಯ ಎರಡು ಬದಿಯಲ್ಲೂ ಗಿಡಗಂಟಿಗಳು ಬೆಳೆದು ಅದರ ಬೇರುಗಳು ಸೇತುವೆ ಕಟ್ಟಡವನ್ನೆ ಅಪಾಯದಂಚಿಗೆ ತಳ್ಳುತ್ತಿವೆ. ಈ ಸೇತುವೆ ಮೇಲೆಯೇ ಎಲ್ಲ ಜನ ಪ್ರತಿನಿದಿಗಳು, ಅಧಿಕಾರಿಗಳು ಸಂಚರಿಸುತ್ತಾರೆ. ಆದರೆ ಇದನ್ನು ಉಳಿಸುವ ನಿಟ್ಟಿನಲ್ಲಿ ಯಾರೂ ಪ್ರಯತ್ನಿಸದೆ ನಿರ್ಲಕ್ಷಿಸುತ್ತಿದ್ದಾರೆ. ಸೇತುವೆಯಲ್ಲಿನ ಗಿಡಗಂಟಿಗಳು ಬೆಳೆದು ಶಿಥಿಲಗೊಳ್ಳುತ್ತಿರುವ ಬಗ್ಗೆ ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಸೇತುವೆಯ ಗಿಡಗಂಟಿಗಳ ತೆರವಿಗೆ ಮುಂದಾಗಬೇಕು. ಬಿರುಕು ಬಿಟ್ಟಿರುವುದನ್ನು ದುರಸ್ತಿಪಡಿಸಲು ಮುಂದಿನ ನಾಲ್ಕು ದಿನಗಳಲ್ಲಿ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಸೇತುವೆ ಮೇಲೆ ಸಂಚರಿಸುವ ವಾಹನಗಳ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಬೇಲೂರಿಗೆ ಹಳೇ ಯಗಚಿ ಸೇತುವೆ ಯಗಚಿ ಜಲಾಶಯ ಸ್ಮಾರಕವಿದ್ದಂತೆ. ಅವುಗಳನ್ನು ಉಳಿಸುವ ಕೆಲಸವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕು. ಆದರೆ ಅವರ ನಿರ್ಲಕ್ಷ್ಯದಿಂದ ಸೇತುವೆ ದಿನದಿಂದ ದಿನಕ್ಕೆ ಅವನತಿಯತ್ತ ಸಾಗುತ್ತಿದೆ. ಶಾಸಕರು ಇದರ ಬಗ್ಗೆ ಗಮನಹರಿಸಿ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಸೇತುವೆ ಉಳಿಸಿ ಅಭಿಯಾನ ಮಾಡಬೇಕಾಗುತ್ತದೆ ಎಂದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಧಿಕಾರಿ ಎಸ್.ಡಿ.ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯ ದಿನದ ಅಂಗವಾಗಿ ನಗರವನ್ನು ಸ್ವಚ್ಛಗೊಳಿಸುವ ಕೆಲಸ ಇರುವುದರಿಂದ ಅದು ಮುಗಿದ ನಂತರ ಎರಡು ದಿನಗಳಲ್ಲಿ ಸೇತುವೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಕರವೇ ಉಪಾಧ್ಯಕ್ಷ ಹನೀಫ್, ನಗರ ಯುವ ಘಟಕದ ಅಧ್ಯಕ್ಷ ಮೋಹನ್, ಸಹ ಕಾರ್ಯದರ್ಶಿ ಸ್ವಾಮಿ, ನಗರ ಉಪಾಧ್ಯಕ್ಷ ಪ್ರಸನ್ನ, ಮುಖಂಡರಾದ ಸೋಮು, ಆದರ್ಶ ಇದ್ದರು.