ತರೀಕೆರೆಯಲ್ಲಿ ಮ್ಯಾಮ್ಕೋಸ್ ಷೇರುದಾರರ ಸಭೆಯನ್ನು ಸಂಘದ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಉದ್ಘಾಟಿಸಿದರು. ಬಿ.ಸಿ.ನರೇಂದ್ರ, ಮಲ್ಲಿಕಾರ್ಜುನ್, ಟಿ.ವಿ.ಶಿವಶಂಕರಪ್ಪ, ಟಿ.ಎಲ್.ರಮೇಶ್, ಸುರೇಶ್‌ಚಂದ್ರ ಇತರರಿದ್ದರು. 
ಜಿಲ್ಲೆ

ಮ್ಯಾಮ್ಕೋಸ್‌ಗೆ ರೂ. 5.52 ಕೋಟಿ ಲಾಭ

ತರೀಕೆರೆ: ಪ್ರಸಕ್ತ ಸಾಲಿನ ವಹಿವಾಟಿನಲ್ಲಿ ಮ್ಯಾಮ್ಕೋಸ್ 5.52 ಕೋಟಿ ರೂ. ಲಾಭಗಳಿಸಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಹೇಳಿದರು.

ಮ್ಯಾಮ್ಕೋಸ್ ಷೇರುದಾರರ ಸಭೆಯಲ್ಲಿ ಮಾತನಾಡಿ, 1939ರಲ್ಲಿ ಪ್ರಾರಂಭವಾಗಿ 2006ನೇ ಸಾಲಿನಲ್ಲಿ ಸಹಕಾರ ಭಾರತಿ ನೇತೃತ್ವದಲ್ಲಿ ಅಧಿಕಾರ ಹಿಡಿದ ಮ್ಯಾಮ್ಕೋಸ್ ಸದ್ಯ 30 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಎರಡು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಮ್ಯಾಮ್ಕೋಸ್ ನಿರ್ಮಿಸಿರುವ ಸ್ವಂತ ಕಟ್ಟಡವನ್ನು ಉದ್ಘಾಟಿಸಿದ್ದು, ಮೂರು ಜಿಲ್ಲೆಯಲ್ಲಿ ಇದರ ಕಾರ್ಯ ವ್ಯಾಪ್ತಿ ವಿಸ್ತರಿಸಿದೆ. ಷೇರುದಾರರು ಅಡಕೆ ಪೂರೈಕೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಸಂಸ್ಥೆ ಜತೆ ವೈಯಕ್ತಿಕ ಗೌರವ ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು.

ಶಿವಮೊಗ್ಗ ಮ್ಯಾಮ್ಕೋಸ್‌ನಿಂದ ರಫ್ತು ಮಾಡುವ ಅಡಕೆಗೆ ದೇಶದೆಲ್ಲೆಡೆ ಹೆಚ್ಚಿನ ಬೇಡಿಕೆ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಡಕೆ ಬೆಲೆ ಕುಸಿಯಲು ಬಿಡದಂತೆ ಬೆಳೆಗಾರರ ಹಿತ ಕಾಯುವ ಕೆಲಸ ಮಾಡುತ್ತಿದೆ. ಷೇರುದಾರರಿಗೆ ಆರೋಗ್ಯ ವಿಮೆ ನೀಡುತ್ತಿರುವುದು ಮಾತ್ರವಲ್ಲ, ಅಡಕೆ ತೋಟದಲ್ಲಿ ಕೆಲಸ ನಿರ್ವಹಣೆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಅವಘಡಗಳಿಗೆ ವಿಮಾ ಸೌಕರ್ಯ ಕಲ್ಪಿಸಲಾಗಿದೆ. ಪ್ರತಿ ವ್ಯವಹಾರದ ಮಾಹಿತಿ ಮೊಬೈಲ್ ಮೂಲಕ ರವಾನಿಸಲಾಗುತ್ತಿದ್ದು, ಸಾಲ ಪಡೆದ ಷೇರುದಾರರು ಸಕಾಲದಲ್ಲಿ ಮರುಪಾವತಿಗೆ ಮುಂದಾಗಬೇಕು. ಈ ಮೂಲಕ ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಹಕಾರ ಭಾರತಿ ಸಂಸ್ಥೆ ತಾಲೂಕು ಶಾಖೆ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿದರು. ಅಕಾಲಿಕ ಮರಣ ಹೊಂದಿದೆ ಷೇರುದಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮ್ಯಾಮ್ಕೋಸ್ ನಿರ್ದೇಶಕರಾದ ಸುರೇಶ್‌ಚಂದ್ರ, ಬಿ.ಸಿ.ನರೇಂದ್ರ, ಟಿ.ಎಲ್.ರಮೇಶ್, ಸುಭಾಷ್, ರತ್ನಾಕರ, ಜಯಶ್ರೀ, ಕೃಷ್ಣಮೂರ್ತಿ, ವಿರೂಪಾಕ್ಷ, ಸತೀಶ್, ವೀರೇಶ್, ಕುಬೇಂದ್ರಪ್ಪ, ಧರ್ಮೇಂದ್ರ, ಕೀರ್ತಿರಾಜ್, ರಾಜ್ಯ ಸಹಕಾರ ಮಹಾ ಮಂಡಲದ ಮಾಜಿ ಅಧ್ಯಕ್ಷ ಟಿ.ವಿ.ಶಿವಶಂಕರಪ್ಪ ಮತ್ತಿತರರಿದ್ದರು.