ಮಡಿಕೇರಿ: ಚೆಟ್ಟಳ್ಳಿ ಸಮೀಪದ ಪೊನ್ನತ್ಮೊಟ್ಟೆಯ ಗೋಲ್ಡನ್ ಎಫ್.ಸಿ ಫುಟ್ಬಾಲ್ ವತಿಯಿಂದ ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಮ್ಯಾಡ್ರಿಡ್ ಎಫ್.ಸಿ.ಗರಗಂದರೂರು ತಂಡ ಚೆಟ್ಟಳ್ಳಿಯ ಸಿಲ್ವರ್ ಸ್ಟಾರ್ ತಂಡವನ್ನು ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಜಿದ್ದಾಜಿದ್ದಿನ ಫೈನಲ್ ಪಂದ್ಯಾಟದ ಪ್ರಥಮಾರ್ಧದಲ್ಲಿ ಮ್ಯಾಡ್ರಿಡ್ ಎಫ್.ಸಿ.ತಂಡವು ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಸಿಲ್ವರ್ ಸ್ಟಾರ್ ಚೆಟ್ಟಳ್ಳಿ ತಂಡವು ಗೋಲು ದಾಖಲಿಸಿ ಸಮಬಲ ಸಾಧಿಸಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ 3-4 ಗೋಲುಗಳಿಂದ ಜಯಗಳಿಸಿ ಮ್ಯಾಡ್ರಿಡ್ ಎಫ್.ಸಿ.ಗರಗಂದೂರು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ರೋಜರ್ ಎಫ್.ಸಿ.ಪಾಲಿಬೆಟ್ಟ ಹಾಗೂ ಸಿಲ್ವರ್ ಸ್ಟಾರ್ ಚೆಟ್ಟಳ್ಳಿ ತಂಡಗಳ ನಡುವೆ ನಡೆಯಿತು. ಸಿಲ್ವರ್ ಸ್ಟಾರ್ ಚೆಟ್ಟಳ್ಳಿ ತಂಡವು 2-0 ಗೋಲುಗಳ ಅಂತರದಿಂದ ಜಯಗಳಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಸ್ಟ್ರೈಕರ್ ಎಫ್.ಸಿ.ವಿರಾಜಪೇಟೆ ಹಾಗೂ ಮ್ಯಾಡ್ರಿಡ್ ಎಫ್.ಸಿ ಗರಗಂದೂರು ತಂಡಗಳ ನಡುವಿನ ಪಂದ್ಯಾಟದಲ್ಲಿ ಗರಗಂದೂರು ತಂಡವು 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಪಂದ್ಯಾಟದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮ್ಯಾಡ್ರಿಡ್ ತಂಡದ ಪ್ರವೀಣ್, ಬೆಸ್ಟ್ ಗೋಲು ಕೀಪರ್ ಪ್ರಶಸ್ತಿಯನ್ನು ಮ್ಯಾಡ್ರಿಡ್ ತಂಡದ ಹಂಸ, ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಸಿಲ್ವರ್ ಸ್ಟಾರ್ ತಂಡದ ಸುನಿಲ್ ಹಾಗೂ ಅತ್ಯುತ್ತಮ ತಂಡದ ಪ್ರಶಸ್ತಿಯನ್ನು ಸ್ಟ್ರೈಕರ್ ಎಫ್.ಸಿ ತಂಡವು ಪಡೆದುಕೊಂಡಿತು.
ಪಂದ್ಯಾಟದ ತೀರ್ಪುಗಾರರಾಗಿ ರಹೀಮ್ ಚೆಟ್ಟಳ್ಳಿ, ವಿರೂಪಾಕ್ಷ, ನವೀನ್, ಮುಬಶ್ಶಿರ್ ಕಾರ್ಯನಿರ್ವಹಿಸಿದರು.