ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶಶಿಧರ ಕೋಸಂಬೆ, ಆಕಾಶ ರಿಕ್ಕೆ, ವಿಲಾಸ ಬಕ್ಕಾ, ಮೋಹನ ರೆಡ್ಡಿ, ಎನ್.ರಾಜು ಇದ್ದರು. 
ಜಿಲ್ಲೆ

ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ

ರಾಜು ಯಮಕನಮರಡಿ

ಭಾಲ್ಕಿ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಮತ್ತು ಸಂಸ್ಕಾರಯುತ ಶಿಕ್ಷಣ ಅತ್ಯಂತ ನೀಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಹೇಳಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಚನ್ನಬಸವೇಶ್ವರ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರ, ಮಹಾನಗರ ಪ್ರದೇಶಗಳಲ್ಲಿ ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿದೆ. ಮೌಲ್ಯಯುತ ಶಿಕ್ಷಣ ಮರೆಯಾಗುತ್ತಿದೆ. ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿ, ಡ್ರಗ್ಸ್ ಸೇರಿ ವಿವಿಧ ಚಟಗಳಿಗೆ ಬಲಿಯಾಗುತ್ತಿರುವ ಉದಾಹರಣೆಗಳು ನಮ್ಮ ಮಧ್ಯೆ ಸಾಕಷ್ಟಿವೆ. ಆದರೆ, ಗಡಿಭಾಗದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಧರ್ಮ ಪ್ರಚಾರ, ಪ್ರಸಾರದ ಜತೆಗೆ ಶೈಕ್ಷಣಿಕ ಸಂಸ್ಥೆಯನ್ನು ತೆರೆದು ಈ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಸಂಸ್ಕಾರ ಕಲಿಸಿ ಕೊಡುತ್ತಿರುವುದು ಹೆಮ್ಮೆ ತರಿಸಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತ ನಾಡು ಕಟ್ಟುವ ಕೆಲಸ ಮಾಡುತ್ತಿರುವುದು ಸಂತಸ ತರಿಸಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳು ಶಾರೀರಿಕ ಮತ್ತು ಮಾನಸಿಕವಾಗಿ ಸದೃಢರಾಗಲು ವಿದ್ಯೆಯ ಜತೆಗೆ ಕ್ರೀಡೆಗೂ ಆದ್ಯತೆ ನೀಡುವುದು ಅಗತ್ಯವಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಎನ್ನದೇ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಹೇಳಿದರು.

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್​ ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಎನ್.ರಾಜು ವಾರ್ಷಿಕ ವರದಿ ಮಂಡಿಸಿದರು. ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಯುವ ಮುಖಂಡ ಆಕಾಶ ರಿಕ್ಕೆ, ವಿಲಾಸ ಬಕ್ಕಾ, ಪ್ರಶಾಂತ ರೆಡ್ಡಿ, ಶಶಿಕುಮಾರ ಇತರರಿದ್ದರು.

ಗಡಿ ಭಾಗದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಧರ್ಮ ಸೇವೆ ಜತೆಗೆ ಅನಾಥ ಮಕ್ಕಳು, ನಿರ್ಗತಿಕರಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ನಿಜವಾದ ದೇವರ ಸೇವೆ ಮಾಡುತ್ತಿದ್ದಾರೆ.

|ಡಿ.ಕೆ.ಸಿದ್ರಾಮ ಅಧ್ಯಕ್ಷರು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ