ಬಾಗಲಕೋಟೆ: ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ತಂದೆ ತಾಯಿಯಂದಿರು ತಮ್ಮ ಮಕ್ಕಳಿಗೆ ಮತ್ತು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಆರೋಗ್ಯಕರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಗುರುಸ್ವಾಮಿ ಹಿರೇಮಠ ಹೇಳಿದರು.
ನಗರದ ಲೈಯನ್ಸ್ ಕ್ಲಬ್ ಸಭಾಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ೨೦೨೪ ಸಾಲಿನ ಶಿಕ್ಷಕ ಹಾಗೂ ಅಭಿಯಂತರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ನಮ್ಮ ವಿದ್ಯಾರ್ಥಿಗಳು ಅಂಕ ಪಡೆಯುವ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಹೊರತು ಬದುಕು ರೂಪಿಸುವ ಹಾಗೂ ತಮ್ಮ ಜೀವನ ಬೆಳಗಿಸುವ ಸಂಸ್ಕಾರಯುತ ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ನಮ್ಮ ನಾಡು, ದೇಶ ಸಮಾಜ ಗಟ್ಟಿಗೊಳಿಸುವ ಗುಣಮಟ್ಟದ ಕಾರ್ಯ ಮಾಡುವ ಅಭಿಯಂತರರು ದೊರೆಯುವುದು ವಿರಳವಾಗಿದೆ. ಶಿಕ್ಷಕರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬದುಕು ಮತ್ತು ಅಭಿಯಂತರರು ಮೋಕ್ಷಗುಂಡಂ ಸರ್ ಎಂ.ವಿಶ್ವೇಶ್ವರಯ್ಯನವರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು, ಪ್ರಾಮಾಣಿಕ ಸೇವೆ ಸಲ್ಲಿಸುವ ಮನೋಭಾವ ಇಂದಿನವರು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದಣ್ಣ ಹಂಪನಗೌಡರ, ಮಲ್ಲಿಕಾರ್ಜುನ ಸಾಸ್ನೂರ, ಬ್ರಾಂಚ್ ಕ್ಲಬ್ ಅಧ್ಯಕ್ಷ ಲಯನ್ ನೇಹಾ ಇಂಜಗನೇರಿ, ಲಯನ್ ಉಮಾ ಪಟ್ಟಣಶೆಟ್ಟಿ, ಖಜಾಂಚಿ ಲಯನ್ ಹಣಮಂತ ದೊಡಮನಿ ಉಪಸ್ಥಿತರಿದ್ದರು. ಲಿಂಗರಾಜ ವೈದ್ಯ ಪರಿಚಯಿಸಿದರು. ಡಾ.ಭಾಗ್ಯ ಪಾಟೀಲ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಎಸ್.ಎನ್.ಮೇಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮೇಲಿ, ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ವಿಜಯಕುಮಾರ ಜಮಖಂಡಿ, ಸೀಮಿಕೇರಿ ಗುರುಬಸವ ಪಬ್ಲಿಕ್ ಶಾಲೆಯ ಅಕಾಡೆಮಿಕ್ ನಿರ್ದೇಶಕ ಡಾ.ಪುಷ್ಪಾ ಇಂಜಗಣೇರಿ, ತುಳಸಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿರ್ಮಲಾ ಪತ್ತಾರ, ಹುಬ್ಬಳಿಯ ಅಭಿಯಂತರ ಅಲ್ಲದಿನ್ ಇಮಾಮಸಾಬ ಸೇರಿದಂತೆ ವಿವಿಧ ಸಾಧನಕರಿಗೆ ಸನ್ಮಾನಿಸಲಾಯಿತು.