ಜಿಲ್ಲೆ

ಮೌಲ್ಯವಿಲ್ಲದ ಜೀವನ ನಿರರ್ಥಕ

ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ

ತುಮಕೂರು-:ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ. ಅಂತೆಯೇ, ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಆರೋಗ್ಯ ಮತ್ತು ಅಧ್ಯಾತ್ಮ ಅವಶ್ಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್​ ಆಶ್ರಯದಲ್ಲಿ ಭಾನುವಾರ ಜರುಗಿದ ಜನ ಜಾಗೃತಿ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಾನವೀಯ ಮೌಲ್ಯ ಇಲ್ಲದ ಜೀವನ ನಿರರ್ಥಕ. ಜೀವನ ಎಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ ಧರ್ಮ ಎಂಬ ಹುಟ್ಟು ಅವಶ್ಯಕ. ಜ್ಞಾನದಿಂದ ಅಧಿಕಾರ ಸಿಗಬಹುದು. ಆದರೆ, ಗೌರವ ಸಿಗಬೇಕೆಂದರೆ ಉತ್ತಮ ವ್ಯಕ್ತಿತ್ವ ಇರಬೇಕು. ಅನುಭವ ಜಗತ್ತಿನ ಶ್ರೇಷ್ಠ ಶಿಕ್ಷಕ. ಉಸಿರಿರುವವರೆಗೂ ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಬೇಕು ಎಂದರು.

ಯಾರು ಎಷ್ಟೇ ತುಳಿದರೂ ಗರಿಕೆ ಕೆಲ ಕ್ಷಣಗಳಲ್ಲಿ ಮೊದಲಿನ ಸ್ಥಿತಿಗೆ ಬರುತ್ತದೆ. ಅದು ಯಾವತ್ತೂ ಬೇಸರಿಸಿಕೊಳ್ಳುವುದಿಲ್ಲ ಮತ್ತು ಎದ್ದು ನಿಲ್ಲುವುದನ್ನು ಮರೆಯುವುದಿಲ್ಲ. ಮನುಷ್ಯನ ಮನೋಭಾವ ಗರಿಕೆಯಂತಿರಬೇಕು. ಮೂಕನ ಮಾತು ಬೇಗ ಅರ್ಥ ಮಾಡಿಕೊಳ್ಳಬಹುದು. ಆದರೆ ಮುಖವಾಡ ಧರಿಸಿ ಹಿಂದೆ ಮಾತನಾಡುವವರ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಉಜ್ವಲ ಬದುಕಿಗೆ ಜೀವನ ದರ್ಶನದ ಅರಿವನ್ನು ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಘಟನೆ ಕಾಣಬಹುದು. ತುಮಕೂರು ನಗರದಲ್ಲಿ ಹಮ್ಮಿಕೊಂಡ ಧನುಮಾರ್ಸದ ಪೂಜಾ ಹಾಗೂ ಸಮಾರಂಭಗಳು ತೃಪ್ತಿ ತಂದಿವೆ ಎಂದು ನುಡಿದರು.

ಸಮಾಜದ ಮುಖಂಡರಾದ ಮಾಜಿ ಸಚಿವ ಸೊಗಡು ಶಿವಣ್ಣ, ಎ.ಎಸ್​.ಸೋಮಶೇಖರ, ಬಿ.ಎಸ್​.ಮಂಜುನಾಥ, ಗಂಗಾಧರ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್​.ಶ್ರೀಧರ, ಡಿ.ಎಂ.ರಾಜಶೇಖರ್​, ಸಿದ್ದಪ್ಪ, ರೇಣುಕಾ ಪರಮೇಶ್​, ರಾಜೇಶ್ವರಿ ರುದ್ರಪ್ಪ, ನಳಿನಾ ಶಿವಾನಂದ, ಮುರಳೀಧರ ಹಾಲಪ್ಪ ಮೊದಲಾದ ಗಣ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಪತ್ರಕರ್ತ ಪ್ರಶಾಂತ ರಿಪ್ಪನ್​ಪೇಟೆ "ಶ್ರೀ ಜಗದ್ಗುರು ಪಂಚಾಚಾರ್ಯ ಪಂಚಸೂತ್ರ' ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ-ಶ್ರೀ ಕೇದಾರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಈಚನೂರ ಗ್ರಾಮದಲ್ಲಿ ಫೆಬ್ರವರಿಯಲ್ಲಿ ಜರುಗುವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಗವಿಮಠದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ಇದ್ದರು. ಸಿದ್ಧರಬೆಟ್ಟದ ಶ್ರೀವಿರಭದ್ರ ಶಿವಾಚಾರ್ಯ ಸ್ವಾಮೀಜಿ ವೀರಶೈವ ಧರ್ಮ ಸಂಸತಿ ಗುರು ಪರಂಪರೆಯ ಮಹತ್ವ ವಿಚಾರಗಳನ್ನು ಪ್ರಸ್ತಾಪಿಸಿದರು. ವೈ.ಕೆ.ಜ್ಯೋತಿ, ಪೂರ್ಣಿಮಾ ಪ್ರಕಾಶ ಕಾರ್ಯಕ್ರಮ ನಡೆಸಿಕೊಟ್ಟರು. ಧನುಮಾರ್ಸದ ಅಂಗವಾಗಿ ಶ್ರೀರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಸಹಸ್ರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಮಾರಂಭದ

ನಂತರ ಅನ್ನ ದಾಸೋಹ ಜರುಗಿತು.

ಸಂಘಟನೆ ನಿರೀಕ್ಷಿತ ಮಟ್ಟದಲ್ಲಿಲ್ಲ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ, ವೀರಶೈವ ಧರ್ಮದ ಸಂಸತಿ ಬೆಳೆದುಕೊಂಡ ಬಂದ ಪರಂಪರೆ ಅಪೂರ್ವ. ಆಚಾರ್ಯರ ಮತ್ತು ಶರಣರ ಪರಿಶ್ರಮದಿಂದಾಗಿ ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸುತ್ತಾ ಬಂದಿದೆ. ವೀರಶೈವ ಧರ್ಮದಲ್ಲಿ ನೂರಾರು ಒಳಪಂಗಡ ಭೇದ ಭಾವನೆಯಿಂದಾಗಿ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಬೇಸರಿಸಿದರು.