ಜಿಲ್ಲೆ

ಮೌಲ್ಯಯುತ ಸಾಹಿತ್ಯ ಅವಶ್ಯ

ಬೀದರ್: ಮಾನವೀಯ ಮೌಲ್ಯವುಳ್ಳ ಸಾಹಿತ್ಯ ಜನರ ಮನ ತಟ್ಟುತ್ತದೆ. ಇಂಥ ಸಾಹಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ರಚಿಸುವುದು ಇಂದಿನ ಅಗತ್ಯ ಎಂದು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಸಾಹಿತಿ ಮಾಣಿಕ ನೇಳಗಿ ಅವರ ರಚಿತ ಬದಲಾಗೋಣ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯದಲ್ಲೂ ಮಾನವೀಯ ಮೌಲ್ಯದ ಬರವಣಿಗೆ ಮತ್ತು ಚಿಂತನೆ ಕಮ್ಮಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ವಿಷಾದಿಸಿದರು.

ಕೃತಿ ಕುರಿತು ಮಾತನಾಡಿದ ಸಂಶೋಧಕರು, ಖಜಾನೆ ಅಧಿಕಾರಿ ಡಾ. ಎಂ.ಎಸ್. ಶಿರವಾಳ, ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಹಿತಿಯಲ್ಲಿ ಪರಿಪಕ್ವತೆ ಬೇಕು. ವಿಷಯವನ್ನು ಸರಿಯಾಗಿ ಮನನ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಮಾಣಿಕ ನೇಳಗಿ ಅವರ ಕೃತಿಯಲ್ಲಿ ಜನಪರ, ಪರಿಸರಪರ ಕಾಳಜಿಯಿದೆ. ಇಂಥ ಕೃತಿಗಳು ಜನರಿಗೆ ಅವಶ್ಯಕವಾಗಿವೆ ಎಂದರು.

ಕೃತಿ ರಚನೆಕಾರ ಮಾಣಿಕ ನೇಳಗಿ ಮಾತನಾಡಿದರು. ಹಿರಿಯ ರಂಗಭೂಮಿ ಕಲಾವಿದ ಚಂದ್ರಗುಪ್ತ ಚಾಂದಕವಠೆ ಉದ್ಘಾಟಿಸಿದರು. ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ನಾರಾಯಣರಾವ್ ಭಂಗಿ, ಚಂದ್ರಪ್ಪ ಹೆಬ್ಬಾಳಕರ್, ಶಂಭುಲಿಂಗ ವಾಲದೊಡ್ಡಿ, ಎಂ.ಜಿ. ದೇಶಪಾಂಡೆ, ಎಂ.ಜಿ. ಗಂಗನಪಳ್ಳಿ, ವಿ.ಎಂ.ಡಾಕುಳಗಿ, ರಾಜೇಂದ್ರ ಗಂದಗೆ, ಸತೀಶ ಪಾಟೀಲ್, ಶಿವಕುಮಾರ ಕಟ್ಟೆ, ಕುಪೇಂದ್ರಶಾಸ್ತ್ರಿ, ಸಂಜೀವಕುಮಾರ ಅತಿವಾಳೆ, ತಾತ್ಯಾರಾವ ಕಾಂಬ್ಳೆ, ಶಾಮ ನೆಲವಾಡೆ, ಸತ್ಯ ಮೂರ್ತಿ, ಗುರು ಮೂರ್ತಿ, ವೀರಭದ್ರಪ್ಪ ಉಪ್ಪಿನ್ ಇತರರಿದ್ದರು. ಡಾ.ರಾಮಚಂದ್ರ ಗಣಾಪುರ ಸ್ವಾಗತಿಸಿದರು. ಸಿದ್ರಾಮಯ್ಯ ಹಿರೇಮಠ ವಂದಿಸಿದರು.