ಆಳಂದ ತಾಲೂಕಿನ ಚಲಗೇರಾದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಲಬುರಗಿ-ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಉದ್ಘಾಟಿಸಿದರು. ಶ್ರೀ ಡಾ.ಜಯಸಿದ್ಧೇಶ್ವರ ಸ್ವಾಮೀಜಿ, ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಶ್ರೀ ಶಾಂತವೀರ ಶಿವಾಚಾರ್ಯರು, ಶ್ರೀ ಚಂದ್ರಶೇಖರ ಶಿವಾಚಾರ್ಯ ಇತರರಿದ್ದರು. 
ಜಿಲ್ಲೆ

ಮೌಲ್ಯಯುತ ಬದುಕಿಗೆ ದಶ ಸೂತ್ರ ಬೆಳಕು

ಆಳಂದ: ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖ- ಶಾಂತಿ ಬದುಕಿಗೆ ಧರ್ಮ ಪರಿಪಾಲನೆ ಮುಖ್ಯ. ರಚನಾತ್ಮಕ ಮತ್ತು ಗುಣಾತ್ಮಕ ಸತ್ಕಾರ್ಯಗಳಿಂದ ಸಮಾಜ ಸದೃಢಗೊಳ್ಳಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಚಲಗೇರಾ ಗ್ರಾಮದಲ್ಲಿ ಶ್ರೀ ಜಗದ್ಗುರು ರಂಭಾಪುರೀಶ್ವರ ಸದನ ಲೋಕಾರ್ಪಣೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಜಾತ್ರೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮೌಲ್ಯಾಧಾರಿತ ಜೀವನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ದಶ ಧರ್ಮ ಸೂತ್ರಗಳು ಬೆಳಕು ತೋರಿವೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಮಾನವ ಜೀವನ ವ್ಯರ್ಥ ಎಂದು ಅಭಿಪ್ರಾಯಪಟ್ಟರು.

ಚಲಗೇರಾದಲ್ಲಿ ಮಾದನಹಿಪ್ಪರಗಿ ಹಿರೇಮಠದ ಶಾಖಾ ಮಠ ಸುಂದರವಾಗಿ ನಿರ್ಮಾಣ ಮಾಡುವ ಮೂಲಕ ಶ್ರೀ ಶಾಂತವೀರ ಶಿವಾಚಾರ್ಯರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರ ನಿರಂತರ ಶ್ರಮ ಮತ್ತು ಸಾಧನೆ ವರ್ಣಿಸಲಾಗದು. ಶ್ರೀಗಳಿಂದ ಈ ಭಾಗದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆಯ ಶಕ್ತಿ ಸಂವರ್ಧನೆಗೊಳ್ಳುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದು ಶ್ಲಾಘಿಸಿದರು.

ಚಲಗೇರಾ ಹಿರೇಮಠದ ಶ್ರೀ ಶಾಂತವೀರ ಶಿವಾಚಾರ್ಯರು ನೇತೃತ್ವ ವಹಿಸಿ ಆಶೀರ್ವಚನ ನೀಡಿ, ಈ ಭಾಗದ ಭಕ್ತರಿಗೆ ಹಬ್ಬದ ಸಂಭ್ರಮ ಉಂಟಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಹಾಗೂ ಭಕ್ತರ ಸಹಕಾರದಿಂದ ಭವ್ಯ ಸದನ ನಿರ್ಮಾಣಗೊಂಡು ಉದ್ಘಾಟನೆಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ ಎಂದರು.

ಕಲಬುರಗಿ-ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ವೀರಶೈವ ಧರ್ಮ ಸಕಲರ ಹಿತವನ್ನು ಬಯಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯಾವುದೇ ತಾರತಮ್ಯವಿಲ್ಲದೆ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಶ್ರೀ ಶಾಂತವೀರ ಶಿವಾಚಾರ್ಯರು ಧರ್ಮ ಕಾರ್ಯದ ಜತೆಗೆ ಭಕ್ತರನ್ನು ಉದ್ಧರಿಸುವ ಕೆಲ ಮಾಡುತ್ತಿದ್ದಾರೆ ಎಂದು ಹೇಳಿದರು.

ಗೌಡಗಾಂವ್‌ದ ಶ್ರೀ ಜಯಸಿದ್ಧೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯ, ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ನೀರಗುಡಿಯ ಶ್ರೀ ಮಲ್ಲಿನಾಥ ಮಹಾರಾಜ, ಹತ್ತಿಕಣಬಸದ ಶ್ರೀ ಪ್ರಭುಶಾಂತ ಸ್ವಾಮೀಜಿ, ಹಿರೊಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ, ಕಲಬುರಗಿಯ ಶ್ರೀ ಗಿರಿಯಪ್ಪ ಮುತ್ಯಾ, ಧುತ್ತರಗಾಂವ್‌ದ ಶ್ರೀ ಸಿದ್ಧಮ್ಮ ತಾಯಿ ಸಮ್ಮುಖ ವಹಿಸಿದ್ದರು.

ಪ್ರಮುಖರಾದ ಶಿವಶರಣಪ್ಪ ಶೇರಿ, ಶಿವಪುತ್ರಪ್ಪ ಪಾಟೀಲ್ ಮುನ್ನಳ್ಳಿ, ಗುರುಶಾಂತ ಎಸ್.ಪಾಟೀಲ್, ಅರುಣಕುಮಾರ ಪಾಟೀಲ್, ಶಿವಾನಂದ ಪಾಟೀಲ್, ಗುರುಗೌಡ ಕೋರಳ್ಳಿ, ಶರಣು ಭೂಸನೂರ, ಶರಣು ನರೋಣಿ, ಅಶೋಕ ಸಾವಳೇಶ್ವರ, ಬಸವರಾಜ ಉಪ್ಪಿನ್, ಈರಣ್ಣ ಝಳಕಿ, ಆನಂದ ದೇಶಮುಖ ಇತರರಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಪಲ್ಲಕ್ಕಿಯಲ್ಲಿ ರಂಭಾಪುರಿ ಜಗದ್ಗುರುಗಳ ಅದ್ದೂರಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ಮಹಿಳೆಯರು ಕುಂಭದೊಂದಿಗೆ ಹೆಜ್ಜೆಹಾಕಿದರು. ಜೈಘೋಷಗಳು ಮೊಳಗಿದವು. ದಾರಿಯುದ್ದಕ್ಕೂ ಜನರು ಗುರುಗಳ ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು.

ಧರ್ಮ ಶ್ರೇಷ್ಠವಾದದ್ದು, ಅದಕ್ಕೆ ಹಾನಿ ಮಾಡಲು ಮುಂದಾದವರೇ ನಾಶವಾಗುತ್ತಾರೆ. ಲಿಂಗಾಯತ ಬಿಟ್ಟು ವೀರಶೈವವಿಲ್ಲ. ಎರಡು ಒಂದೇ ಆಗಿದೆ. ಮಠ ಸಂಸ್ಕೃತಿ ಬೆಳೆಯುತ್ತಿರುವುದು ಸಮಾಜಕ್ಕೆ ಶುಭ ಕಾಲವಾಗಿದೆ. ನಮ್ಮ ಪೂರ್ವಜರು ಲಿಂಗಾಯತ ವೀರಶೈವ ಎಂದೇ ಹೇಳಿದ್ದಾರೆ. ಹಾನಗಲ್‌ನ ಶ್ರೀ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಎಲ್ಲರೂ ಸಾಗಿ ಧರ್ಮ ಕಾಪಾಡಬೇಕು.

| ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಬಾಳೆಹೊನ್ನೂರು