ಎನ್.ಆರ್.ಪುರದ ಡಿಸಿಎಂಸಿ ಪ್ರೌಢಶಾಲೆಯಲ್ಲಿ ಪವಾಡ ಬಯಲು ಕಾರ್ಯಕ್ರಮವನ್ನು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಉದ್ಘಾಟಿಸಿದರು. ಹುಲಿಕಲ್ ನಟರಾಜ್, ಹೊಸೂರು ಸುರೇಶ್, ಶ್ಯಾಮಲಾ, ದ್ವಾರಮಕ್ಕಿ ಸತೀಶ್, ಡಿ.ಸಿ.ದಿವಾಕರ್, ಲೇಖಾ, ಭಾರತಿ, ಪದ್ಮಾ ಇತರರಿದ್ದರು.  
ಜಿಲ್ಲೆ

ಮೌಢ್ಯಾಚರಣೆಯಿಂದ ಮುಕ್ತರಾಗೋಣ

ಎನ್.ಆರ್.ಪುರ: ಪ್ರಸ್ತುತ ಮೌಢ್ಯದ ಯುದ್ಧ ಹೆಚ್ಚಾಗುತ್ತಿದೆ. ಮೌಢ್ಯಾಚರಣೆಯಿಂದ ಮುಕ್ತರಾಗಬೇಕಿದೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.

ಶನಿವಾರ ಪಟ್ಟಣದ ಡಿಸಿಎಂಸಿ ಪ್ರೌಢಶಾಲೆಯಲ್ಲಿ ಶಾಶ್ವತ ಮಹಿಳಾ ಒಕ್ಕಲಿಗರ ಸಂಘ ಆಯೋಜಿಸಿದ್ದ ಪವಾಡ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲು ಹುಟ್ಟಿದ್ದೇ ಮಾನವತಾವಾದ, ನಂತರ ಆಸ್ತಿಕವಾದ, ನಾಸ್ತಿಕವಾದ. ಈಗ ಮತ್ತದೇ ಮಾನವತಾವಾದಕ್ಕೆ ಮರಳುತ್ತಿದ್ದೇವೆ. ಮೌಢ್ಯದ ಮೂಲಕ ನಮ್ಮನ್ನು ಮೂರ್ಖರನ್ನಾಗಿಸುವ ಕೆಲವು ಹಿತಾಸಕ್ತಿಗಳು ಕಾಯುತ್ತಿರುತ್ತವೆ ಎಂದರು.

ದೇವರು ಇದ್ದಾನೆ ಮತ್ತು ಇಲ್ಲ ಎಂಬುವವರಿಬ್ಬರೂ ಸ್ವಾರ್ಥಿಗಳು. ನಾವೆಲ್ಲರೂ ಮನುಷ್ಯತ್ವದಿಂದ ಬದುಕೋಣ. ಇನ್ನೊಬ್ಬರಿಗೆ ನೋವಾಗದಂತೆ ಬದುಕುವುದೇ ಧರ್ಮ. ಸತ್ಯ ಯಾವುದೆಂದು ಅರ್ಥೈಸಬೇಕಾಗಿದೆ. ಪಂಚಾಂಗಕ್ಕಿಂತ ಪಂಚ ಅಂಗಗಳು ಮುಖ್ಯವಾಗಿವೆ. ಮನೆಯ ವಾಸ್ತುವಿಗಿಂತ ಮನಸಿನ ವಾಸ್ತು ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದು ಹೇಳಿದರು.

ಭವಿಷ್ಯವನ್ನು ರೂಪಿಸಿಕೊಡುತ್ತೇವೆ ಎನ್ನುವ ಪೊಳ್ಳು ಜೋತಿಷಿಗಳೇ ಆಂತರಿಕ ಭಯೋತ್ಪಾದಕರು. ದೇವರಿಗೂ ಮೋಸ ಮಾಡಿ ಮತ್ತು ದೇವರನ್ನೇ ನಂಬಿಕೊಂಡು ಬದುಕುವ ಜೀವಿ ಇದ್ದರೆ ಅದು ಮನುಷ್ಯ. ವಿದ್ಯಾರ್ಥಿಗಳು ಪ್ರಶ್ನಿಸದೆ ಏನನ್ನೂ ಸ್ವೀಕರಿಸಬಾರದು. ಮನುಷ್ಯ ಸಂಘ ಜೀವಿಯಾಗಿ ಬದುಕಬೇಕು. ಮನಸ್ಸಿಗೆ ಶಾಂತಿ ನೀಡುವ ದೇವರು ನಮಗೆ ಬೇಕು. ಮೌಢ್ಯಕ್ಕೆ ಶರಣಾಗುತ್ತಿರುವ ನಾವು ಅಜ್ಞಾನಿಗಳು. ಆಚರಣೆ ಇರಬೇಕು, ಆದರೆ ಮೌಢ್ಯಾಚರಣೆ ಇರಬಾರದು ಎಂದು ಹೇಳಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ಮೌಢ್ಯದಿಂದಾಗಿ ಜನರನ್ನು ಮೂರ್ಖರನ್ನಾಗಿಸಲಾಗುತ್ತಿದೆ. ಶಿಕ್ಷಕರಾಗಿದ್ದ ಹುಲಿಕಲ್ ನಟರಾಜ್ ಅವರು ಮೌಢ್ಯ ನಿರ್ಮೂಲನೆಗಾಗಿ ಜೀವನವನ್ನೇ ಮುಡಿಪಿಟ್ಟಿದ್ದಾರೆ. ಇವರು ದೈವ ಅಥವಾ ದೇವರ ವಿರೋಧಿಯಲ್ಲ. ನಾವೆಲ್ಲರೂ ವೈಜ್ಞಾನಿಕ, ವೈಚಾರಿಕ ಭಾವ ಬೆಳೆಸಿಕೊಳ್ಳಬೇಕು. ಮೌಢ್ಯಾಚರಣೆಯಿಂದ, ಭಯದಿಂದ ಗುಲಾಮರಾಗಿ ಬದುಕಬೇಕಾಗುತ್ತದೆ. ಮಾನಸಿಕವಾಗಿ ಬಲಿಷ್ಠವಾಗಿರಬೇಕು. ಧರ್ಮದ ಜತೆಯಲ್ಲಿ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ನಾವೆಲ್ಲರೂ ಸ್ವಾಭಿಮಾನಿಗಳಾಗಿ ಬದುಕೋಣ ಎಂದು ತಿಳಿಸಿದರು.

ಶಾಶ್ವತಿ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷೆ ಶ್ಯಾಮಲಾ ಸತೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಢ್ಯಾಚರಣೆ ವಿರೋಧಿ ಅರಿವು ಮೂಡಿಸುವ ಅಗತ್ಯ ಇದೆ. ನಾವೆಲ್ಲ ಮೂಢನಂಬಿಕೆಯಿಂದ ಮುಕ್ತರಾಗಬೇಕಾಗಿದೆ ಎಂದರು.

ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಹೊಸೂರು ಸುರೇಶ್, ಡಿ.ಸಿ.ದಿವಾಕರ್, ದ್ವಾರಮಕ್ಕಿ ಸತೀಶ್, ಎಸ್.ಎಸ್.ಶಾಂತಕುಮಾರ್, ಲೇಖಾ ವಸಂತ್, ಭಾರತಿ ಚಂದ್ರಶೇಖರ್, ಪದ್ಮಾ ರಮೇಶ್, ಡಾಕಮ್ಮ ಇದ್ದರು.