ಬೇಲೂರಿನಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಭಾರತಕ್ಕಾಗಿ ವಿಜ್ಞಾನದ ನಡಿಗೆ ಕಾರ್ಯಕ್ರಮದಲ್ಲಿ ಡಾ.ರಮೇಶ್ ಮಾತನಾಡಿದರು. ತೀರ್ಥಕುಮಾರಿ, ಶಿವಪ್ಪ, ಅಂತೋಣಿಸ್ವಾಮಿ, ಶೇಷಪ್ಪ, ಸೌಭಾಗ್ಯಾ, ಸ್ವಾಮಿ, ನೀಲಾ ಇತರರು ಇದ್ದರು.  
ಜಿಲ್ಲೆ

ಮೌಢ್ಯದ ವೈಭವೀಕರಣ ಸಮಾಜಕ್ಕೆ ಮಾರಕ

ಬೇಲೂರು: ಭಗವಾನ್ ಬುದ್ಧ ಜಗತ್ತಿಗೆ ನೀಡಿದ ಸಂದೇಶದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕತೆ ಅಡಗಿದೆ ಎಂದು ಪ್ರಾಂಶುಪಾಲ ಡಾ.ರಮೇಶ್ ಅಭಿಪ್ರಾಯಪಟ್ಟರು.


ಪಟ್ಟಣದ ವಿದ್ಯಾವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದಿಂದ ಬುಧವಾರ ಆಯೋಜಿಸಿದ್ದ ವೈಜ್ಞಾನಿಕ ಭಾರತಕ್ಕಾಗಿ ವಿಜ್ಞಾನದ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ ಮತ್ತು ಬೆಳಕು ನೀಡಿದ ಬುದ್ಧರ ಪ್ರತಿಯೊಂದು ಸಂದೇಶಗಳು ವೈಚಾರಿಕತೆಯಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬದುಕಿನಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಅಳವಡಿಸಿಕೊಂಡು ಮೌಢ್ಯ, ಕಂದಾಚಾರ, ಅಂಧಕಾರದಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.


ಇತ್ತೀಚಿನ ದಿನಗಳಲ್ಲಿ ಮೌಢ್ಯದ ವೈಭವೀಕರಣ ಹೆಚ್ಚಾಗಿ ನಡೆಯುತ್ತಿರುವುದು ಸಮಾಜಕ್ಕೆ ಮಾರಕವಾಗಿದ್ದು, ಇದರಿಂದ ಎಲ್ಲರೂ ದೂರವಿರಬೇಕು. ಜ್ಞಾನ ವಿಜ್ಞಾನ ಸಮಿತಿಯವರು ಜನರಲ್ಲಿ ಇಂಥ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.


ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ವಿಜ್ಞಾನ ಬೆಳೆದಂತೆ ಅಜ್ಞಾನವೂ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ವಿದ್ಯಾವಂತರೆ ಮೌಢ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಹೇಳಿದರು.


ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್, ವೈಜ್ಞಾನಿಕ ಮನೋಭಾವ ಕುರಿತ ವಿಡಿಯೋ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಮೂಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇಸಿಒ ಶಿವಪ್ಪ, ಬಿಜಿವಿಎಸ್ ತಾಲೂಕು ಅಧ್ಯಕ್ಷ ಅಂತೋಣಿಸ್ವಾಮಿ, ಕಾರ್ಯದರ್ಶಿ ಶೇಷಪ್ಪ, ಪದಾಧಿಕಾರಿಗಳಾದ ಸೌಭಾಗ್ಯಾ, ಎಚ್.ಆರ್.ಸ್ವಾಮಿ, ನೀಲಾ ನಾಗಭೂಷಣ್, ನಾಗರಾಜ್ ಇತರರಿದ್ದರು.