ಕುಶಾಲನಗರ: ಸಮಾಜದಲ್ಲಿ ಮೌಢ್ಯ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯಬೇಕಾದರೆ ವೈಜ್ಞಾನಿಕ ಮನೋಭಾವ ಮತ್ತು ಮೌಢ್ಯಾಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಅಖಿಲ ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕೊಡಗು ಜಿಲ್ಲಾ ಸಮಿತಿ ಹಾಗೂ ಅಖಿಲ ಭಾರತ ವಿಚಾರವಾದಿ ಒಕ್ಕೂಟ ವತಿಯಿಂದ ಇಲ್ಲಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಸುಂಟಿಕೊಪ್ಪ ಜೆಸಿಐ, ಕುಶಾಲನಗರ ಕಾವೇರಿ ಜೆಸಿಐ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎನ್ನೆಸ್ಸೆಸ್ಸ್ ಘಟಕ ಸಹಯೋಗದೊಂದಿಗೆ ಮೌಢ್ಯದ ವಿರುದ್ಧ ವಿಜ್ಞಾನ ನಡಿಗೆ ಎಂಬ ಕಾರ್ಯಕ್ರಮದಡಿ ವೈಜ್ಞಾನಿಕ ಮನೋಭಾವನೆ ಕುರಿತು ಏರ್ಪಡಿಸಿದ್ದ ಉಪನ್ಯಾಸ ಹಾಗೂ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಂಡು ಮೌಢ್ಯದ ವಿರುದ್ಧ ಹೋರಾಟ ನಡೆಸಬೇಕು ಎಂದರು.
ವೆಜ್ಞಾನಿಕ ಚಿಂತನೆಗಳು ಜನರಿಗೆ ತಲುಪುತ್ತಿದ್ದು, ದಿನದಿಂದ ದಿನಕ್ಕೆ ಅರಿವು ಉಂಟಾಗುತ್ತಿದೆ. ಆದರೆ ಕೆಲವರು ವಿಚಾರವಾದಿಗಳ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುವಾದ ಹಾಗೂ ಮೌಢ್ಯತೆಯನ್ನು ಹತ್ತಿಕ್ಕಬೇಕಾದಲ್ಲಿ ಯುವ ಜನರು ವೆಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅಂಗೈ ಮತ್ತು ಬಾಯಿಯೊಳಗೆ ಕರ್ಪೂರ ಹಚ್ಚುವುದು, ಶೂನ್ಯದಿಂದ ಬೂದಿ ಸೃಷ್ಟಿಸುವುದು, ಬರಿಗೈಯಿಂದ ಚಿನ್ನದ ಉಂಗುರ ಮತ್ತು ಹೊಸ ನೋಟು ಸೃಷ್ಟಿಸುವುದು ಮತ್ತಿತರ ಪ್ರಾತ್ಯಕ್ಷಿಕೆಗಳ ಮೂಲಕ ವಿವಿಧ ಪವಾಡಗಳ ರಹಸ್ಯವನ್ನು ಬಯಲು ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರಗಳನ್ನು ದೂರ ಮಾಡುವ ಮೂಲಕ ಪರಿಷತ್ ವತಿಯಿಂದ ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ಮಾತನಾಡಿ, ಸಮಾಜದಲ್ಲಿ ವೈಚಾರಿಕತೆಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ವಿಚಾರವಾದಿ ಪ್ರೊ.ನರೇಂದ್ರನಾಯಕ್ ಅವರ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಇದೇ ವೇಳೆ ವೈಜ್ಞಾನಿಕ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿಜ್ಞಾನ ಪರಿಷತ್ ಸಮಿತಿಯ ಜಿಲ್ಲಾ ನಿರ್ದೇಶಕ ಎಂ.ಎನ್.ವೆಂಕಟನಾಯಕ್, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್, ಜಿಲ್ಲಾ ವಿಜ್ಞಾನ ಪರಿಷತ್‌ನ ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ವಿಜ್ಞಾನ ಪರಿಷತ್ ಸದಸ್ಯರಾದ ಕೆ.ಎಸ್.ಮಹೇಶ್, ಎನ್.ಕೆ.ಮಾಲಾದೇವಿ, ವಿಚಾರವಾದಿ ಮಯೂರಶೆಟ್ಟಿ, ಅಮೆರಿಕದ ವೈಚಾರಿಕ ಚಿಂತಕ ಆಸ್ಟಿನ್ ಇತರರು ಇದ್ದರು.
ಚರ್ಚೆ ಮತ್ತು ಸಂವಾದದಲ್ಲಿ ಇಸಿಒ ಕೆ.ಬಿ.ರಾಧಾಕೃಷ್ಣ, ಸಿಆರ್‌ಪಿ ಕೆ.ಶಾಂತಕುಮಾರ್, ವಿವಿಧ ಸಂಘಟನೆಗಳ ಪ್ರಮುಖರಾದ ವಿ.ಸಿ.ಅಮೃತ್, ಕೆ.ವಿ.ಉಮೇಶ್, ಬಿ.ಬಿ.ಹೇಮಲತಾ, ಬಸವರಾಜ್ ಇತರರಿದ್ದರು.