ಮುಂಡರಗಿ: ಮೌಢ್ಯತೆಯ ಹಬ್ಬಗಳಿಗೆ ಕಡಿವಾಣ ಹಾಕಬೇಕು. ಹಾಲುಮತ ಸಮುದಾಯ ಸೇರಿ ಹಿಂದುಳಿದ ಶೋಷಿತ ಸಮುದಾಯ ಗಳಿಗೆ ಮೌಢ್ಯತೆಯ ಹಬ್ಬಗಳು ಶಾಪವಾಗಿವೆ. ಮಾಂಸವು ಆಹಾರ ಪದ್ಧತಿಯಾಗಬೇಕು ಹೊರತು ದೇವರ ಹೆಸರಿನಲ್ಲಿ ಪ್ರಾಣಿ ಬಲಿಕೊಟ್ಟು ತಿನ್ನುವಂತದ್ದು ನಿಲ್ಲಬೇಕು ಎಂದು ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಮತ್ತು ಶಿಬಾರಗಟ್ಟಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ದೇವರ ಹೆಸರಲ್ಲಿ ಪ್ರಾಣಿಬಲಿ ಕೊಡುವುದನ್ನು ಕನಕದಾಸರು ಖಂಡಿಸಿದ್ದರು. ದೇವರು ಎಲ್ಲೂ ಪ್ರಾಣಿ ಬಲಿ ಕೇಳಿಲ್ಲ. ಮೌಢ್ಯತೆ ಹಬ್ಬಗಳಿಂದ ಹೊರಬರಬೇಕು. ಅಂತಹ ಹಬ್ಬಗಳಿಗೆ ಮಾಡುವ ಖರ್ಚನ್ನು ಮಕ್ಕಳ ಶಿಕ್ಷಣ, ಬದುಕಿಗೆ ಮೀಸಲಿಡಬೇಕು. ಭಕ್ತಿ ಎನ್ನುವುದು ಹಾಲುಮತ ಸಮಾಜಕ್ಕೆ ರಕ್ತಗತವಾಗಿ ಬಂದಿದೆ. ಈ ಸಮುದಾಯಕ್ಕೆ ಶಿಕ್ಷಣ ಅವಶ್ಯಕ. ಸಮಾಜ ಬದಲಾವಣೆ ಆಗಬೇಕು. ಮಾನಸಿಕ ನೆಮ್ಮದಿಗೆ ದೈವಿ ಕ್ಷೇತ್ರಗಳು ಅತ್ಯವಶ್ಯಕ ಎಂದರು.
ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಭಾರತ ಬಹುಮುಖಿ ಸಂಸ್ಕೃತಿಯ ರಾಷ್ಟ್ರವಾಗಿದೆ. ಶ್ರಮ ಸಂಸ್ಕೃತಿ ಹೊಂದಿರುವ ಹಾಲುಮತ ಸಮಾಜವು ಈ ನೆಲದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ನಮ್ಮ ಭಾಗದ ವೀರ ದಾರ್ಶನಿಕರನ್ನು ಸ್ಮರಿಸುವ ಕೆಲಸವಾಗಬೇಕು ಎಂದರು.
ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಭಗವಂತ ಒಬ್ಬನೇ ನಾಮ ಮಾತ್ರ ಹಲವು. ದೇವರನ್ನು ಬಿಟ್ಟು ಬದುಕುವವರು ನಾವಲ್ಲ. ಅರಳಿದ ಮನಸ್ಸಿನಿಂದ ದೇವರ ಸ್ಮರಣೆ ಮಾಡಬೇಕು. ಮನುಷ್ಯನಾಗಿ ಎಲ್ಲರೊಂದಿಗೆ ಒಂದಾಗಿ ಬಾಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಮಣ್ಣ ಲಮಾಣಿ, ಹಜರತ್ ಸೈಯದ್ಷಾ ಮೆಹಬೂಬ ಖಾದ್ರಿ, ವೈ.ಎನ್.ಗೌಡರ, ಕೆ. ವಿರೂಪಾಕ್ಷಪ್ಪ, ಫಕೀರಪ್ಪ ಹೆಬಸೂರ, ಜಿ.ರಾಜೇಂದ್ರಕುಮಾರ, ಚಿತ್ರಾ ಪಾಟೀಲ ಮಾತನಾಡಿದರು. ಇದಕ್ಕೂ ಮುನ್ನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀ ಮುದುಕೇಶ್ವರ ಸ್ವಾಮೀಜಿ, ರಾಮಪ್ಪ ಕಾರಣಿಕದ ಗೊರವಯ್ಯ, ಕರಬಸಪ್ಪ ಹಂಚಿನಾಳ, ಭೀಮಸಿಂಗ್ ರಾಠೋಡ, ರವಿ ದಂಡಿನ, ಮಂಜುನಾಥ ಮುಂಡವಾಡ, ಡಾ.ಡಿ.ಎಲ್.ಕಲ್ಲಕುಟಗರ, ರವೀಂದ್ರ ಉಪ್ಪಿನಬೆಟಗೇರಿ, ಡಾ.ಕುಮಾರಸ್ವಾಮಿ ಹಿರೇಮಠ, ಉಪಸ್ಥಿತರಿದ್ದರು. ತಾ.ಪಂ.ಸದಸ್ಯ ರುದ್ರಗೌಡ ಪಾಟೀಲ ಹಾಗೂ ಮಹಾಂತೇಶ ಹಲವಾಗಲಿ ಕಾರ್ಯಕ್ರಮ ನಿರ್ವಹಿಸಿದರು.
ಸರ್ವಧರ್ಮ ಸಮ್ಮೇಳನ ಇಂದು: ಶಿಂಗಟಾಲೂರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಮತ್ತು ಶಿಬಾರಗಟ್ಟಿ ಪ್ರತಿಷ್ಠಾಪನೆ, ಕಳಸಾರೋಹಣ ನಿಮಿತ್ತ ಜ.27ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎಚ್.ಕೆ. ಪಾಟೀಲ ಕನಕದಾಸರ ಭಾವಚಿತ್ರ ಅನಾವರಣಗೊಳಿಸುವರು. ಡಾ.ಡಿ.ಎಲ್. ಕಲ್ಲಕುಟಗರ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎಚ್.ಎಂ. ರೇವಣ್ಣನವರು, ಪಿ.ಟಿ. ಪರಮೇಶ್ವರ ನಾಯಕ, ರಾಘವೇಂದ್ರ ಹಿಟ್ನಾಳ, ಎಸ್. ರಾಮಪ್ಪ, ಕುಸುಮಾವತಿ ಶಿವಳ್ಳಿ, ಶ್ರೀನಿವಾಸ ಮಾನೆ ಇತರರು ಪಾಲ್ಗೊಳ್ಳಲಿದ್ದಾರೆ.