ಬಾಗಲಕೋಟೆ: ವಚನ ಸಾಹಿತ್ಯದ ಮೂಲಕ ಸಾಮಾಜಿಕ ಮೌಢ್ಯತೆಯನ್ನು ಹೊಡೆದು ಹಾಕುವಲ್ಲಿ ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಸಾಧನೆ ಅವಿಸ್ಮರಣೀಯ ಎಂದು ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಆಗಿಹೋದ ಶರಣರಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಶರಣರಾಗಿದ್ದರು. ತಮ್ಮ ಹರಿತವಾದ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ್ದಾರೆ ಎಂದರು.
ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಶಿವಪುರದಲ್ಲಿ ಜನಿಸಿದ ಚೌಡಪ್ಪ ತನ್ನ ಆಜ್ಞಾತ್ಮಕ ಶಕ್ತಿಯಿಂದ ರಾಜನೊಬ್ಬನ ಮಗನನ್ನು ಬದುಕಿಸಿದ್ದರಿಂದ ರಾಜ ನೂರಾರು ಎಕರೆ ಜಮೀನನ್ನು ಚೌಡಯ್ಯನಿಗೆ ನೀಡಿದ್ದರು. ಆ ಎಲ್ಲ ಜಮೀನನ್ನು ಸಾರ್ವಜನಿಕರಿಗೆ ನೀಡಿದ್ದರಿಂದ ಆ ಗ್ರಾಮ ಚೌಡಯ್ಯ ದಾನಪುರವಾಗಿದೆ. ಹೀಗಾಗಿ ಚೌಡಯ್ಯನವರು ಕೇವಲ ವಚನಕಾರರಲ್ಲ ಮಹಾದಾನಿಗಳು ಕೂಡಾ ಆಗಿದ್ದರು ಎಂದರು.
ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ ಜಾತಿ ವ್ಯವಸ್ಥೆ, ಲಿಂಗ ಬೇಧ ಹಾಗೂ ಅಸಮಾನತೆ ಅಂದು ಸಮಾಜದಲ್ಲಿ ಎದ್ದು ಕಾಣುತ್ತಿರುವದರಿಂದ ಆ ಸಾಂದರ್ಭಕ್ಕೆ ಅನುಗುಣವಾಗಿ ಕಠೋರ ನುಡಿಗಳಿಂದಾದರೂ ಜನ ಜಾಗೃತರಾಗಬಹುದು ಎಂಬ ಉದ್ದೇಶದಿಂದ ಹರಿತವಾದ ನುಡಿಗಳಿಂದ ವಚನಗಳನ್ನು ಬರೆದರು. ಬಸವಾದಿ ಶರಣರು ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನುಭವ ಮಂಟಪದಲ್ಲಿ ನಿರ್ಣಯಗೊಂಡ ವಚನಗಳನ್ನು ಹೊರತಂದರು. ಅಂತಹ ಬೆಲೆಬಾಳುವ ಹಾಗೂ ಮಹತ್ವವುಳ್ಳ ಲಕ್ಷಾಂತರ ವಚನಗಳು ಬಿಜ್ಜಳನ ದಾಳಿಯಿಂದಾಗಿ ಕಳೆದು ಹೋಗಿದವುಗಳಲ್ಲಿ ಸಾವಿರಾರು ವಚನಗಳು ಮಾತ್ರ ಉಳಿದಿವೆ. ಇಂತಹ ಅರ್ಥಪೂರ್ಣ ವಚನಗಳನ್ನು ಮಕ್ಕಳಿಗೆ ತಿಳಿಸಿ ಮೌಲ್ಯಾಧಾರಿತ ಶಿಕ್ಷಣ ನೀಡಿಬೇಕಾಗಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ವರ್ಷಾ ಬಾರಕೇರ ಮಾತನಾಡಿ ಬಸವಣ್ಣನವರೆಂಬ ಬಾಣಂಗಳದಲ್ಲಿ ಶರಣರೆಂಬ ನಕ್ಷತ್ರಗಳಲ್ಲಿ ದೃವತಾರೆಯಾಗಿ ಬೆಳಗಿದವರು ಅಂಬಿಗರ ಚೌಡಯ್ಯ. ಆದ್ದರಿಂದಲೇ ಅವರನ್ನು ನಿಜಶರಣ ಎಂದು ಕರೆಯಲಾಯಿತು. ಅಂದಿನ ಕಾಲದಲ್ಲಿಯ ಅಡಗಿರುವಂತ ಓರೆ, ಕೋರೆಗಳನ್ನು, ಧಾರ್ಮಿಕ ಆಚಾರ ವಿಚಾರಗಳನ್ನು ವಿವರಿಸಿ ಅಜ್ಞಾನವೆಂಬ ಕತ್ತಲೆಯನ್ನು ತೊಡೆದು ಹಾಕಲು ನೇರವಾಗಿ ಕಠಿಣ ಶಬ್ದಗಳ ವಚನಗಳಿಂದ ತಿದ್ದುವ ಕೆಲಸ ಮಾಡಿದ್ದಾರೆ. 12ನೇ ಶತಮಾನದ ಶರಣರೆಲ್ಲ ತಮ್ಮ ಆರಾದ್ಯದೈವವನ್ನು ನಾಮಾಂಕಿತ ಇಟ್ಟುಕೊಂಡರೆ ಚೌಡಯ್ಯನವರು ಸ್ವಯಂ ತಮ್ಮ ಹೆಸರನ್ನು ನಾಮಾಂಕಿತವಾಗಿ ಇಟ್ಟುಕೊಂಡವರು. ಇಂತಹ ಶರಣರ ವಚನಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ಶೋಭಾ ರಾವ್, ಪ್ರೇಮಾ ಅಂಬಿಗೇರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಸಮುದಾಯದ ಮುಖಂಡರಾದ ಸಂಗಪ್ಪ ತಮ್ಮನ್ನವರ, ಯಲ್ಲಪ್ಪ ಯಡಹಳ್ಳಿ ಉಪಸ್ಥಿತರಿದ್ದರು.