ಜಿಲ್ಲೆ

ಮೌಢ್ಯ ಜ್ಞಾನದ ಮೇಲೆ ಸವಾರಿ : ನಾಗೇಶ್ ಹೆಗಡೆ

ಮೈಸೂರು: ಮೌಢ್ಯ ಜ್ಞಾನದ ಮೇಲೆ ಸವಾರಿ ಮಾಡುತ್ತಿದೆ. ನಮ್ಮ ಕೈಗೆ ಜ್ಞಾನದ ದೀವಿಗೆ ಆಗಿ ಬರಬೇಕಾದ ಕೃತಕಬುದ್ಧಿಮತ್ತೆ ತಂತ್ರಜ್ಞಾನವು ಅಜ್ಞಾನವಾಗಿ ಜನರಿಗೆ ಮಾಹಿತಿ ರವಾನಿಸುತ್ತಿವೆ ಎಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು.

ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ‘ಕನ್ನಡವೆಂದರೆ ಬರಿ ನುಡಿಯಲ್ಲ, ಅದಕಿದೆ ವಿಜ್ಞಾನದ ಸ್ಪರ್ಶ’ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜ್ಞಾನವನ್ನು ಸರಳವಾಗಿ ಹೇಳುವಲ್ಲಿ ಶಿಕ್ಷಕರು ಕೂಡ ವಿಫಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಜ್ಞಾನದ ಜ್ಞಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಿಜ್ಞಾನ ಎಂಬುದು ನಮ್ಮ ಹೃದಯಕ್ಕೆ ಇಳಿಯುತ್ತಿಲ್ಲ. ಇದು ಅರ್ಥವಾಗದೇ ಇರುವುದರಿಂದ ಮತ್ತು ವಿಜ್ಞಾನದ ಮೇಲೆ ಆಸಕ್ತಿ ಬೆಳೆಯದಿರುವುದೇ ಪ್ರಾಣಿ ಸಂಕುಲದ ಅವನತಿಗೆ ಕಾರಣವಾಗುತ್ತಿದ್ದು, ಜತೆಗೆ, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.

ಚಾಮರಾಜನಗರದಲ್ಲಿ ವಿಷಕಾರಿ ತರಕಾರಿ ತಿಂದು ಒಬ್ಬ ರೈತ ಮೃತಪಟ್ಟ. ಇದಕ್ಕೆ ಕಾರಣ ತರಕಾರಿಗೆ ಸಿಂಪಡಿಸುವ ಔಷದ ಮೇಲೆ ಎಚ್ಚರಿಕೆಯ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಮಾತ್ರ ಮುದ್ರಿಸಿ, ಕನ್ನಡವನ್ನು ನಿರ್ಲಕ್ಷಿಸಿದ್ದು. ರೈತರಿಗೆ ವೈಜ್ಞಾನಿಕ ಮಾಹಿತಿಗಳನ್ನು ಸ್ಥಳೀಯ ಭಾಷೆಗಳಲ್ಲಿ ನೀಡುವ ಕೆಲಸವನ್ನು ಕಂಪನಿಗಳು ಮಾಡುತ್ತಿಲ್ಲ ಎಂದರು.

ಚಿಂತಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಸಂಕಿರಣದ ವಿಚಾರಗಳನ್ನು ಗಾಳಿಯಲ್ಲಿ ತೂರದೇ ಆ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಸಿ.ಕೆ.ರೇಣುಕಾರ್ಯ ಮಾತನಾಡಿ, ಜಗತ್ತಿನಲ್ಲಿ ಇರುವುದೆಲ್ಲವೂ ವಿಜ್ಞಾನವೇ ಆಗಿದ್ದು, ಎಲ್ಲರೂ ಕೂಡ ವಿಜ್ಞಾನಿಗಳೇ ಆಗಿದ್ದಾರೆ. ಅದಕ್ಕೆ ಸಾಹಿತ್ಯ ಮಾಧ್ಯಮವಾಗಿ ಕೆಲಸ ಮಾಡಬೇಕು. ವೈಜ್ಞಾನಿಕ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕೇಳಿಕೊಂಡರು.

ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರುಳೀಧರ್ ಮಾತನಾಡಿದರು. ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಅವರ ‘ಹೊನ್ನಾರಿನ ಗೆರೆಗಳು ಮತ್ತು ‘ಕಾಲಕಟ್ಟಳೆಯ ಮೀರಿ’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ವಿಚಾರ ಸಂಕಿರಣದಲ್ಲಿ 10ಕ್ಕೂ ಹೆಚ್ಚು ಸಂಶೋಧಕರು ಮತ್ತು ತಜ್ಞರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರುಳೀಧರ್ ಭಾಗವತ್, ಮಹಾಜನ ಪ್ರಥಮ ದರ್ಜೆ ಕಾಲೀಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ಇನ್ನಿತರರಿದ್ದರು.