ದಾವಣಗೆರೆ: ನಾವಿಂದು ಮೌಢ್ಯದತ್ತ ಹೊರಳದೇ ಕುವೆಂಪು ಅವರಂತೆ ವೈಚಾರಿಕತೆ ಕಡೆಗೆ ಮರಳಬೇಕಿದೆ. ದೇಶದಲ್ಲಿ ಮಂದಿರಗಳ ಬದಲಾಗಿ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ವೈಭವೀಕರಿಸಿದಾಗ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ರಾಷ್ಟ್ರಕವಿ ಕುವೆಂಪು. ಅವರ ಚಿಂತನೆ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವಿಶ್ವಮಾನವರಾಗಲು ಸಾಧ್ಯ. ಅವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇದು ಒಂದು ದಿನಕ್ಕೆ ಸೀಮಿತವಾಗದಿರಲಿ ಎಂದರು.
ಪರಸ್ಪರ ದ್ವೇಷ ಸಾಧನೆಯಿಂದ ವಿಶ್ವ ಮಾನವರಾಗಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವುಳ್ಳ ದೇಶ, ಪ್ರಪಂಚದಲ್ಲಿ ಉನ್ನತ ಸ್ಥಾನವನ್ನೇರಲಿದೆ. ಕುವೆಂಪುರವರು ಮೌಢ್ಯ ನಿರ್ಮೂಲನೆಗಾಗಿ ಹಲವಾರು ವೈಚಾರಿಕ ಕಾದಂಬರಿ, ಕಾವ್ಯ ಹಾಗೂ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಮತ್ತೆ ಮೌಢ್ಯದತ್ತ ತಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ ಕುವೆಂಪುರವರು ಭಾರತ ಕಂಡ ಶ್ರೇಷ್ಠ ಕವಿಯಾಗಿದ್ದು, ಕನ್ನಡ ನಾಡು ಹಾಗೂ ಕನ್ನಡಿಗರಿಗೆ ಸಾಹಿತ್ಯದ ಮೂಲಕ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಕಾವ್ಯ, ಕೃತಿ, ನಾಟಕ, ವಿಮರ್ಶೆಗಳಲ್ಲಿ ವಿಜ್ಞಾನ, ತತ್ವಜ್ಞಾನ, ಮನೋವಿಜ್ಞಾನ ಹಾಗೂ ಜೀವ ವಿಜ್ಞಾನವನ್ನು ಕಾಣಬಹುದು ಎಂದು ಹೇಳಿದರು.
ಕರುನಾಡಿನ ಸಂಸ್ಕೃತಿಯ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಶೀರ್ಷಿಕೆಯನ್ನು ಕುವೆಂಪುರವರ ಕಾವ್ಯಗಳಲ್ಲಿ ಕಾಣಬಹುದು. ಜನರು ಹುಟ್ಟುತ್ತ ವಿಶ್ವಮಾನವರಾಗಿ, ಸಾಯುವಾಗ ಅಲ್ಪ ಮಾನವರಾಗಬಾರದು. ಆಚರಣೆಗಳಲ್ಲಿ ಮೌಢ್ಯಗಳನ್ನು ಕೈಬಿಟ್ಟು, ವೈಚಾರಿಕವಾಗಿ ಚಿಂತಿಸಬೇಕಾಗಿದೆ ಎಂದರು.
ಉಪಮೇಯರ್ ಯಶೋದಾ ಯಗ್ಗಪ್ಪ, ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, ಕಸಾಪ ಜಿಲಾಧ್ಯಕ್ಷ ಬಿ. ವಾಮದೇವಪ್ಪ, ಡಿಎಚ್‌ಒ ಡಾ. ಎಸ್.ಷಣ್ಮುಖಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಪದವಿ ಪೂರ್ವ ಶಿಕ್ಷಣ ಇಲಾಖೆ ಡಿಡಿ ಕರಿಸಿದ್ದಪ್ಪ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಆವರಗೆರೆ ರುದ್ರಮುನಿ ಇದ್ದರು.