ಕೊಳ್ಳೇಗಾಲ: ಪಟ್ಟಣದ ದಾಸನಪುರ ರಸ್ತೆಯಲ್ಲಿ ಬುಧವಾರ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ದೊಡ್ಡ ಮೋರಿಗೆ ಉರುಳಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಳವಳ್ಳಿ ಪಟ್ಟಣದ ಶೇಖ್‌ಅಹಮ್ಮದ್ ಎಂಬುವರ ಪುತ್ರ ಸಬಾಜ್ ಪಾಷಾ(19) ಮೃತ ಚಾಲಕ. ಈತ ಜ.25 ರಂದು ಮಳವಳ್ಳಿಯಿಂದ ಕೊಳ್ಳೇಗಾಲದ ಕಡೆಗೆ ಕಾವೇರಿಪುರ- ದಾಸನಪುರ ಮಾರ್ಗವಾಗಿ ಬರುವಾಗ ಅವಘಡ ಸಂಭವಿಸಿದೆ. ಕೊಳ್ಳೇಗಾಲದಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಸಬಾಜ್ ಪಾಷಾ ಮನೆಯಲ್ಲಿ ಹೇಳಿ ಬಂದಿದ್ದ. ಆದರೆ ತಡರಾತ್ರಿಯಾದರೂ ಸಂಬಂಧಿಕರ ಮನೆಗೆ ಸೇರದಿರುವುದನ್ನು ತಿಳಿದ ಮನೆಯವರು ಹುಡುಕಾಟ ನಡೆಸಿದಾಗ ರಾತ್ರಿ 1 ಗಂಟೆ ಸಮಯದಲ್ಲಿ ದಾಸನಪುರ ರಸ್ತೆ ಬದಿಯಲ್ಲಿರುವ ಮೋರಿ ಒಳಗೆ ಕಾರು ಉರುಳಿ ಅಪಘಾತದಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ.
ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.