ಕಲಬುರಗಿ: ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದ, ಮಹಾನ್ ಸಂತ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲು ನೈತಿಕತೆ ಉಳಿಸಿಕೊಂಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಅರ್ಜುನ ಭದ್ರೆ ಆಗ್ರಹಿಸಿದರು.
ಸಾಂಸ್ಕೃತಿಕ ನಾಯಕ ಬಸವಣ್ಣನರು ಸಮಾನತೆ ಮೌಲ್ಯ ಸಾರಿದ್ದರು. ಇಂತಹ ನಾಡಿನಲ್ಲಿ ಕೋಮುವಾದಿ ರಾಮಭಕ್ತನ ಆಟ ನಡೆಯುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಲಬುರಗಿಯ ಹೆಮ್ಮೆಯಾದ ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಮೋದಿಗೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಖರ್ಗೆ ಕುಟುಂಬದ ವಿರುದ್ಧ ಮಾತನಾಡಿ, ಅಸ್ಪÊಷ್ಯ ಸಮುದಾಯದವರನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಸಂಘಪರಿವಾರದವರು ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಆರಂಭಿಸಿ, ಹಿಂದುಳಿದ ವರ್ಗಕ್ಕಾಗಿ ಮಂಡಲ ವರದಿ ಜಾರಿಯನ್ನು ತಡೆದರು, ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ತೊಡಗಿ ಸಾವಿರಾರು ಜನರ ಸಾವಿಗೆ ಕಾರಣರಾದವರನ್ನು ಭಾರತ ರತ್ನ ನೀಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಕಪೀಲ ಸಿಂಗೆ, ಸೈಬಣ್ಣ ಕೋಟನೂಕರ್ ಇತರರಿದ್ದರು.