ಜಿಲ್ಲೆ

ಮೋದಿ ರೋಡ್ ಶೋ, ಸಂಚಾರ ನಿರ್ಬಂಧ

reportermys

ಮೈಸೂರು: ಪ್ರಧಾನಿ ನರೇಂದ್ರಮೋದಿ ನಗರದಲ್ಲಿ ಏ.30ರಂದು ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸುವುದರಿಂದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಮಾರ್ಗ ಬದಲಾವಣೆ ಮಾಡಿ ನಗರ ಪೊಲೀಸ್ ಕಮೀಷನರ್ ಬಿ.ರಮೇಶ್ ಆದೇಶ ಹೊರಡಿಸಿದ್ದಾರೆ.
ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗಿನ ರಾಧಾಕೃಷ್ಣ ಮಾರ್ಗ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತದಿಂದ ಹೈವೇ ವೃತ್ತದವರೆಗಿನ ಸಯ್ಯಜಿರಾವ್ ರಸ್ತೆ, ಎಲ್‌ಐಸಿ ವೃತ್ತದಿಂದ ಕೆಂಪೇಗೌಡ ವೃತ್ತದವರೆಗಿನ ಹಳೆಯ ಮೈಸೂರು ಬೆಂಗಳೂರು ರಸ್ತೆ, ಕೆಂಪೇಗೌಡ ವೃತ್ತದಿಂದ ಮೈಸೂರು ವಿಮಾನ ನಿಲ್ದಾಣದವರೆಗಿನ ರಿಂಗ್ ರಸ್ತೆಯಲ್ಲಿ ಎಲ್ಲ ವಾಹನ ಸಂಚಾರ ಸಂಪೂರ್ಣ ಬಂದ್ ಅಗಿವೆ.
ರೋಡ್ ಶೋ ನಡೆಸುವ ಸಂಬಂಧ ಗಣ್ಯರು ಸಂಚರಿಸುವ ಮಾರ್ಗ ಹಾಗೂ ರೋಡ್ ಶೋ ನಡೆಸುವ ಮಾರ್ಗಗಳಲ್ಲಿ ಗಣ್ಯರ ಸುಗಮ ಸಂಚಾರ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಕೆಲ ಮಾರ್ಗದಲ್ಲಿ ನಿರ್ಬಂಧ ವಿಧಿಸಲಾಗಿದೆ.
ಅತಿಗಣ್ಯರ ಸಂಚಾರ ಮಾರ್ಗದಲ್ಲಿ ಗಣ್ಯರ ವಾಹನಗಳ ಸಂಚಾರವನ್ನು ಹೊರತುಪಡಿಸಿದಂತೆ ಇತರೆ ಎಲ್ಲ ಮಾದರಿಯ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ಬಸ್‌ಗಳಿಗೆ ಬದಲಿ ಮಾರ್ಗ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ.