ಹೊಳೆನರಸೀಪುರ: ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿ ಮಾಡುವ ಸಲುವಾಗಿ ರಾಜ್ಯದ ವಿವಿಧಡೆ ಪ್ರವಾಸ ಮಾಡುತ್ತಿರುವುದಾಗಿ ನಮೋ ಬ್ರಿಗೇಡ್‌ನ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಮೈಸೂರಿನಿಂದ ಶನಿವಾರ ಪಟ್ಟಣಕ್ಕೆ ಆಗಮಿಸಿ ಮಹಾತ್ಮಗಾಂಧಿ ಪುತ್ಥಳಿ ಹಾಗೂ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ರಾಜ್ಯದ ವಿವಿಧೆಡೆಗಳಲ್ಲಿ ಪ್ರವಾಸ ಮಾಡುತ್ತಿದ್ದು, ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಮಾಡುವುದೇ ತಮ್ಮ ಗುರಿ ಎಂದರು.
ತಾವು ಹಾಸನದ ಮೂಲಕ ಕರಾವಳಿ ಪ್ರದೇಶಗಳಲ್ಲಿನ ನಗರ ಪಟ್ಟಣಗಳಿಗೆ ತೆರಳಿ ಆಲ್ಲಿನ ಜನರನ್ನು ಭೇಟಿ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ತಾವು ಇದಕ್ಕಾಗಿ ಸುಮಾರು 3 ಸಾವಿರ ಕಿಲೋಮೀಟರ್‌ನಷ್ಟು ಪ್ರವಾಸ ಕೈಗೊಳ್ಳುತ್ತಿದ್ದು, ತಮ್ಮೊಂದಿಗೆ ಹತ್ತಾರು ನಮೋ ಬ್ರಿಗೇಡ್‌ನ ಕಾರ್ಯಕರ್ತರು ಇದ್ದಾರೆ ಎಂದು ಮಾಹಿತಿ ನೀಡಿದರು.
ಸೂಲಿಬೆಲೆ ಅವರೊಂದಿಗೆ ತಾಲೂಕು ವಿಶ್ವ ಹಿಂದು ಪರಿಷತ್‌ನ ತಮ್ಮಯ್ಯ, ವಸಂತ್, ಬಿಜೆಪಿ ಮುಖಂಡ, ವಕೀಲ ಜಿ. ದೇವರಾಜೇಗೌಡ ಸೇರಿದಂತೆ ವಿಶ್ವ ಹಿಂದು ಪರಿಷತ್ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ಇದ್ದರು.
ಚಕ್ರವರ್ತಿ ಅವರು ಪಟ್ಟಣಕ್ಕೆ ಬರಲಿದ್ದಾರೆಂಬ ಮಾಹಿತಿ ಮೇರೆಗೆ ಪಟ್ಟಣದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಸೂಲಿಬೆಲೆ ಅವರು ಮೈಸೂರಿನಿಂದ ಆಗಮಿಸಿ ಹೌಸಿಂಗ್‌ಬೋರ್ಡ್ ಮುಖಾಂತರ ಕೋಟೆ ಬೀದಿ ಮೂಲಕ ಗಾಂಧಿವೃತ್ತಕ್ಕೆ ಅಗಮಿಸಿದ ವೇಳೆ ಅವರಿಗೆ ರಕ್ಷಣೆ ನೀಡುವ ಸಲುವಾಗಿ ಸಾಕಷ್ಟು ಪೊಲೀಸರು ಬೆಂಗಾವಲಾಗಿ ನಿಂತಿದ್ದರು.
ನಂತರ ಅವರು ಹಾಸನಕ್ಕೆ ತೆರಳುವ ವೇಳೆ ಅವರ ಹಿಂದೆ ಅನೇಕ ಪೊಲೀಸ್ ವಾಹನಗಳು ತೆರಳಿದವು.
ಚಕ್ರವರ್ತಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ನಂತರ ಕಾರ್ಯಕರ್ತರು ಅವರನ್ನು ಬೈಕ್ ರ‌್ಯಾಲಿಯ ಮೂಲಕ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ನಂತರ ಹಾಸನಕ್ಕೆ ಬೀಳ್ಕೊಟ್ಟರು.