ಜಿಲ್ಲೆ

ಮೋದಿ ನಾಯಕತ್ವಕ್ಕೆ ಗುಜರಾತ್ ಫಲಿತಾಂಶ ಸಾಕ್ಷಿ; ರಾಜ್ಯದಲ್ಲೂ 140-150 ಕ್ಷೇತ್ರಗಳಲ್ಲಿ ಜಯ: ಕುಮಾರ್ ಬಂಗಾರಪ್ಪ ವಿಶ್ವಾಸ

ಸೊರಬ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಗುಜರಾತ್ ಚುನಾವಣೆಯಲ್ಲಿ ಜನತೆ ತೋರಿರುವ ಬೆಂಬಲವೆ ಸಾಕ್ಷಿ. ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಾಧ್ಯವಾಗದಂತೆ ಮತದಾರರು ಫಲಿತಾಂಶ ನೀಡಿದ್ದಾರೆ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದರು.

ಶನಿವಾರ ಪಕ್ಷದ ಕಚೇರಿಯಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಬೂತ್ ಶಕ್ತಿ ಸದೃಢ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವ ಗುರುವಾಗಿ ಹೊರ ಹೊಮ್ಮಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಚಾಣಕ್ಷತನದಿಂದ ದೇಶದ ಅನೇಕ ರಾಜ್ಯಗಳಲ್ಲಿ ಅಸ್ತಿತ್ವಕ್ಕಾಗಿಯೇ ಹೆಣಗಾಡುತ್ತಿರುವ ಕಾಂಗ್ರೆಸ್ ಲೋಕಸಭೆಯಲ್ಲಿಯೂ ಪ್ರತಿಪಕ್ಷವಾಗಿ ಕೂರಲು ಸಾಧ್ಯವಿಲ್ಲದಂತಾಗಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ತಾಲೂಕು ಸೇರಿದಂತೆ 140-150 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ ಸಾಮಾಜಿಕ ಜಾಲತಾಣಗಳ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕಾರ್ಯಕರ್ತರು ಪಕ್ಷದ ಗೆಲವಿಗೆ ಸಂಘಟಿತರಾಗಿ ಕಾರ್ಯೋನ್ಮುಕರಾಗಬೇಕು. ಜನರನ್ನು ತಮ್ಮೆಡೆಗೆ ಸೆಳೆಯುವ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೊರತಾಗಿ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಜನನಾಯಕ ಎಂದರೆ ಅದು ನರೇಂದ್ರ ಮೋದಿ ಮಾತ್ರ. 2004ರಲ್ಲಿ ಬಂಗಾರಪ್ಪ ಅವರ ಜತೆ ಬಿಜೆಪಿ ಸೇರ್ಪಡೆಯಾಗಿದ್ದೆ. ಆದರೆ ಸದೃಢವಾಗಿ ಉಳಿಯುವ ಭಾಗ್ಯ ನನ್ನದಾಗಲಿಲ್ಲ. ಆದರೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಳೆದ 6 ವರ್ಷಗಳ ಹಿಂದೆ ಪಕ್ಷ ಸೇರಿದೆ. ಇಂದು ರಾಜ್ಯ ಹಾಗೂ ದೇಶಕ್ಕೆ ಬಿಜೆಪಿ ಅವಶ್ಯಕತೆ ಎಷ್ಟು ಮುಖ್ಯ ಎನ್ನುವುದು ಅರಿವಾಗಿದೆ ಎಂದರು.

ಭಿನ್ನಮತ ಶೀಘ್ರ ಶಮನ: ಬಿಜೆಪಿ ಶಾಸಕನಾಗಿ ತಾಲೂಕಿನಲ್ಲಿ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಪಾರದರ್ಶಕ ಆಡಳಿತ ನಡೆಸುತ್ತಾ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳನ್ನು ನೀಡಲಾಗಿದೆ. ಅಂತರ ಕಾಯ್ದುಕೊಂಡವರು ಪಕ್ಷದಿಂದ ದೂರವಾಗಿಲ್ಲ. ಅವರು ಸಹ ಬಿಜೆಪಿವರೇ ಆಗಿದ್ದು, ಅವರೆಲ್ಲರ ಒಗ್ಗಟ್ಟಿನ ಶ್ರಮದಿಂದ ಪಕ್ಷ ಬಲಿಷ್ಠವಾಗಲಿದೆ. ಪಕ್ಷದಲ್ಲಿ ಆಂತರಿಕವಾಗಿರುವ ಭಿನಾಭಿಪ್ರಾಯಗಳು ಶೀಘ್ರವೇ ಶಮನವಾಗಲಿದೆ ಎಂದು ಕುಮಾರ್ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.