ಬೆಳಗಾವಿ: ಕೋವಿಡ್ ಅಟ್ಟಹಾಸದಲ್ಲಿ ಅನೇಕ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದೆ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಕ್ರಮಗಳಿಂದ 4 ಟ್ರಿಲಿಯನ್ ಮೊತ್ತದ ಬಜೆಟ್ ಮಂಡನೆ ಮಾಡುವುದರ ಮೂಲಕ ಆತ್ಮ ನಿರ್ಭರ ಭಾರತ ಹಾಗೂ ಜಗದ್ಗುರುವಾಗಿ ಹೊರಹೊಮ್ಮುತ್ತಿದೆ ಎಂದು ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಡಾ.ಸಮೀರ ಕಾಗಲಕರ ಹೇಳಿದರು.
ಬೆಳಗಾವಿ ಗ್ರಾಮಾಂತರ ಜಿಲ್ಲೆ ಬಿಜೆಪಿ ಘಟಕದಿಂದ ನಗರದ ಗೊಮ್ಮಟೇಶ್ವರ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ‘ಕೇಂದ್ರ ಸರ್ಕಾರದ ಆತ್ಮ ನಿರ್ಭರ ಬಜೆಟ್ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಎರಡು ವರ್ಷದಿಂದ ಕೋವಿಡ್ ಮಹಾಮಾರಿ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಪ್ರಪಂಚದಲ್ಲಿಯೇ ದೊಡ್ಡಣ್ಣ ಎನಿಸಿಕೊಂಡ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದ್ದು 33 ಕೋಟಿ ಜನರಿಗೆ ಲಸಿಕೆ ನೀಡದ ಪರಿಸ್ಥಿತಿಗೆ ತಲುಪಿದ್ದರು. ಆದರೆ, ನಮ್ಮ ಭಾರತದಲ್ಲಿ ಉಚಿತವಾಗಿ 135 ಕೋಟಿ ಜನರಿಗೆ ಕರೊನಾ ಲಸಿಕೆ ನೀಡುವ ಮೂಲಕ ಭಾರತವನ್ನು ಕರೊನಾ ಭಯದಿಂದ ಮುಕ್ತಗೊಳಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಕೇಂದ್ರ ಬಜೆಟ್‌ನಲ್ಲಿ ಎಂಟು ವರ್ಷದ ಮುಂದಾಲೋಚನೆಯ ಗುರಿ ಒಳಗೊಂಡಿದ್ದು, ಬರುವ 2030ಕ್ಕೆ ನೂರು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡುವ ಗುರುತರ ಹೆಜ್ಜೆಯನ್ನು ಬಿಜೆಪಿ ಸರ್ಕಾರ ಇಟ್ಟಿದೆ. ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ಕಾರ್ಖಾನೆ, ಗುಡಿ ಕೈಗಾರಿಕೆ ನಿರ್ಮಾಣ ಮಾಡಲು ಹಣದ ಹರಿವು ಹೆಚ್ಚಿಸಿದೆ. ಭಾರತ ಯಾವುದೇ ಕ್ಷೇತ್ರದಲ್ಲಿಯೂ ಕೂಡ ವಿದೇಶಗಳನ್ನು ಅವಲಂಬಿಸದೆ ಎಲ್ಲ ಕ್ಷೇತ್ರಗಳಲ್ಲಿ ಆವಿಷ್ಕಾರ ಕೈಗೊಂಡು ಭಾರತ ಸ್ವಾವಲಂಬನೆ ಸಾಧಿಸಲು ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಈ ಬಜೆಟ್ ಒದಗಿಸಿಕೊಟ್ಟಿದೆ ಎಂದು ಹೇಳಿದರು.
ಪ್ರತಿ ಹಂತದಲ್ಲಿಯೂ ಸ್ವದೇಶಿ ನಿರ್ಮಿತ ವಸ್ತುಗಳ ನಿರ್ಮಾಣಕ್ಕೆ ಕ್ರಮ ಕೈಗೋಳ್ಳುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ಮುಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಬೆಳಗಾವಿಗೆ ವಾಜಪೇಯಿ ಸರ್ಕಾರದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ, ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಮಾರ್ಟ್ ಸಿಟಿ ಅಂತಾರಾಷ್ಟ್ರೀಯ ವಾಣಿಜ್ಯ ವಿನಿಮಯ ಕೇಂದ್ರ, ಧಾರವಾಡ ಬೆಳಗಾವಿ ನೇರ ರೈಲ್ವೆ ಯೊಜನೆಗಳು ಬೆಳಗಾವಿಗೆ ಬಂದಿವೆ ಎಂದರು.
ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ವಕ್ತಾರ ಸಂಜಯ ಕಂಚಿ, ರೇಖಾ ಚಿನ್ನಕಟ್ಟಿ, ಬಸವರಾಜ ನೇಸರಗಿ, ಜಿತೇಂದ್ರ ಮಾದರ, ನಿತಿನ ಚೌಗಲೆ, ಸಂತೋಷ ದೇಶನೂರ, ವೀರಭದ್ರಯ್ಯ ಪೂಜಾರ, ಈರಣ್ಣ ಚಂದರಗಿ, ರಾಜೇಶ ಬಿಳಗಿ, ಮಡಿವಾಳಪ್ಪ ಚಳಕೊಪ್ಪ, ಚಿದಾನಂದ ದೇಮಶೆಟ್ಟಿ, ಮಾರುತಿ ಕೊಪ್ಪದ, ಯುವರಾಜ ಜಾಧವ ಇತರರಿದ್ದರು.
ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಸ್ವಾಗತಿಸಿದರು. ಎಫ್.ಎಸ್. ಸಿದ್ಧನಗೌಡರ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀಪ ದೇಶಪಾಂಡೆ ವಂದಿಸಿದರು.