ದಾವಣಗೆರೆ: ನಗರದಲ್ಲಿ ಭಾನುವಾರ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಮಾತಿಗೆ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಮುಂಭಾಗ ಬಂದು ಭಾಷಣಕ್ಕೆ ಅಡ್ಡಿಪಡಿಸಿದರು. ಮಾತನಾಡದೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಶಾಸಕರೂ ಪಟ್ಟು ಹಿಡಿದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
‘ನಾನೊಬ್ಬ ಶಾಸಕ. ಮಾತನಾಡುವುದು ಬೇಡ ಎನ್ನುವುದಾದರೆ ನನ್ನನ್ನೇಕೆ ಆಹ್ವಾನಿಸಿದಿರಿ. ನಾನು ಹೋರಾಟದಿಂದಲೇ ಬಂದವನು. ದಾವಣಗೆರೆ ಗರಡಿಯಲ್ಲೇ ಬೆಳೆದವನು. ನನಗೂ ಪಟ್ಟು ಗೊತ್ತಿವೆ. ನನಗೆ ನನ್ನ ಪಟ್ಟು, ನಿಮಗೆ ನಿಮ್ಮ ಪಟ್ಟು. ಸಚಿವ ಮಲ್ಲಿಕಾರ್ಜುನ್ ಅವರು ಗಮನಿಸಲೆಂದೇ ನೀವು ಹೀಗೆ ಎದ್ದು ಕೂಗಾಟ ನಡೆಸುತ್ತಿದ್ದೀರಿ’ ಎಂದು ಲೇವಡಿ ಮಾಡಿದಾಗ ಕಾರ್ಯಕರ್ತರ ಕೂಗಾಟ ಹೆಚ್ಚಾಯಿತು.
ಶಾಸಕರಾದ ಕೆ.ಎಸ್. ಬಸವಂತಪ್ಪ, ದೇವೇಂದ್ರಪ್ಪ ಸಮಾಧಾನಿಸಿದರು. ಕಡೆಗೆ ಮೈಕ್ ಬಳಿ ಬಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ‘ಅವರಿಗೆ ಮಾತನಾಡಲು ಬಿಡಿ. ನಂತರ ನಾನು ಉತ್ತರ ನೀಡುತ್ತೇನೆ’ ಎಂದರು. ಆದಾಗ್ಯೂ ಗದ್ದಲ ಮುಂದುವರಿಯಿತು. ಬೇಸತ್ತು ಕಾರ್ಯಕ್ರಮದಿಂದಲೇ ನಿರ್ಗಮಿಸಲು ಮುಂದಾದ ಹರೀಶ್ ಅವರನ್ನು ಮತ್ತೆ ಕೂರಿಸಿಕೊಂಡ ಸಚಿವರು, ಮಾತನಾಡಲು ಅವಕಾಶ ನೀಡಿದರು.
ಹರೀಶ್ ಮಾತಾಡಿದ್ದಿಷ್ಟು:
ಗ್ಯಾರಂಟಿ ಯೋಜನೆಗಳ ಜತೆಗೆ ಸರ್ಕಾರ ಅಭಿವೃದ್ಧಿ ಕಡೆಗೂ ನಿಗಾ ವಹಿಸಬೇಕು. ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಿದ್ದು ಉದ್ಯೋಗಸ್ಥರು, ಶಿಕ್ಷಕಿಯರು, ವಿದ್ಯಾರ್ಥಿಗಳಿಗೆ ಅವಕಾಶವಾಗುತ್ತಿಲ್ಲ ಎಂದರು.
ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಅಕ್ಕಿ ನೀಡುವುದು ಒಳ್ಳೆಯದು. ಆದರೆ, ಕೆಲ ಮಧ್ಯವರ್ತಿಗಳು ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
‘ಗೋದಾಮುಗಳಲ್ಲಿ ಅಕ್ಕಿ ಕೊಳೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರ ಕೇಳಿದ ಅಕ್ಕಿ ನೀಡಲಿಲ್ಲ’ ಎಂದು ಶಾಸಕ ಕೆ.ಎಸ್.ಬಸವಂತಪ್ಪ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಹರೀಶ್ ‘ಮೋದಿ ಕೇಳಿ ನೀವು ಗ್ಯಾರಂಟಿ ಸ್ಕೀಮ್ ಘೋಷಣೆ ಮಾಡಿದ್ದಿರಾ’ ಎಂದು ಪ್ರಶ್ನಿಸಿದರು.
ಆಗ ಸಿಟ್ಟಿಗೆದ್ದ ಕಾರ್ಯಕರ್ತರು ಸರ್ಕಾರವನ್ನು ಟೀಕಿಸುವುದಾದರೆ ಮಾತನಾಡಬೇಡಿ ಎಂದು ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಹರೀಶ್, ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಬಾರದು ಎಂಬುದು ಸರಿಯಲ್ಲ ಎಂದರು.
ಐಎಎಸ್ ಅಧಿಕಾರಿಗಳೂ ಕೂಡ ರಾಜಕೀಯ ಪಕ್ಷದವರಂತೆ ಮಾತನಾಡುವುದು ಶೋಭೆಯಲ್ಲ ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಅವರ ಬಗ್ಗೆಯೂ ಕಿಡಿಕಾರಿದರು.