filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.5494443, 0.39207137);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44; 
ಜಿಲ್ಲೆ

ಮೋದಿ 3.0 ಯುಗಾರಂಭ ಯಶಸ್ಸಿಗಾಗಿ ಪೂಜೆ

ಚಿತ್ರದುರ್ಗ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ಬಿಜೆಪಿ ಮುಖಂಡರು, ಕಾರ್ಯಕರ್ತರು ಜೆಸಿಆರ್ ಬಡಾವಣೆಯಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ಮೋದಿ 3.0 ಯುಗಾರಂಭವಾಗಿದ್ದು, ಮುಂದಿನ 5 ವರ್ಷ ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ನಡೆಯಲೆಂದು ಜೆಸಿಆರ್‌ನ ಗಣಪತಿ ಹಾಗೂ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಜವಹರ್‌ಲಾಲ್ ನೆಹರು ಅವರು ಸತತ 3 ಬಾರಿ ದೇಶದ ಪ್ರಧಾನಿಯಾಗಿದ್ದರು. ಆನಂತರ ಯಾರೂ ಆಗಿರಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಆ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದು, ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.

ಕಳೆದ 10 ವರ್ಷದಲ್ಲಿ ಪ್ರಧಾನಿಯಾಗಿ ದೇಶವನ್ನು ಉತ್ತಮವಾಗಿ ಅಭಿವೃದ್ಧಿಗೊಳಿಸಿ ಮುನ್ನಡೆಸಿದ್ದಾರೆ. ಮುಂದಿನ 5 ವರ್ಷದಲ್ಲೂ ಅವರ ನಾಯಕತ್ವದಲ್ಲಿ ಹೊಸ ಯೋಜನೆಗಳು, ಅಭಿವೃದ್ಧಿ ಕಾರ್ಯ ನಡೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿಶ್ವದ ವಿವಿಧ ದೇಶಗಳ ನಾಯಕರು ಭಾಗವಹಿಸುವ ಮೂಲಕ ಅವರ ಕೈ ಬಲಪಡಿಸಿದ್ದಾರೆ ಎಂದರು.

ಜೆಸಿಆರ್ ವೃತ್ತದಲ್ಲಿ ಸಂಭ್ರಮ: ಜೆಸಿಆರ್ ಬಡಾವಣೆಯ ಕನ್ನಡಾಂಬೆ ವೃತ್ತದ ಬಳಿ ಸಂಜೆ 7.30ರ ನಂತರ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಉರುಮೆ, ಡೊಳ್ಳಿನ ಸದ್ದಿಗೆ ಮೈಮರೆತು ಕೆಲವರು ಕುಣಿದು ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ಜೈ ಎಂದು ಜೈಕಾರ ಹಾಕಿದರು.

ನಗರಸಭೆ ಸದಸ್ಯರಾದ ರೋಹಿಣಿ, ಹರೀಶ್, ಕೃಷ್ಣಮೂರ್ತಿ, ಬಿಜೆಪಿ ಯುವ ಮುಖಂಡರಾದ ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ನಾಗೇಂದ್ರಪ್ಪ, ಮುರುಗೇಶ್, ರಮೇಶ್, ಸೋಮಣ್ಣ, ಆದರ್ಶ, ವಿರೂಪಾಕ್ಷ, ಗೋಪಿ, ಕಲಾ, ವೆಂಕಟೇಶ್, ಪ್ರದೀಪ್ ಇತರರಿದ್ದರು.