ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಸಾಲು ಸಾಲು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಪ್ರಧಾನಿ ಮೋದಿ ನಾನು ಮಾಡಿದ್ದ ಶೇ.10ರಷ್ಟು ಕೆಲಸ ತೋರಿಸಲಿ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.
ನಗರದ ಎನ್.ವಿ.ಕಾಲೇಜ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಮೋದಿ ಯಾವುದೇ ಗ್ಯಾರಂಟಿ ನಿಭಾಯಿಸಿಲ್ಲ. ನಾವು ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ನೀಡಿದ್ದೇವೆ. ನಮ್ಮ ಪದ ಗ್ಯಾರಂಟಿ ಕದ್ದ ಮೋದಿ ಕಳೆದ ೧೦ ವರ್ಷದಲ್ಲಿ ಅವರೇ ನೀಡಿದ್ದ ಉದ್ಯೋಗ, ರೈತರ ಆದಾಯ ದ್ವಿಗುಣ, ಎಂಎಸ್‌ಪಿ, ೧೫ ಲಕ್ಷ ರೂ., ಚಿನ್ನದ ರಸ್ತೆ ಸೇರಿ ಯಾವುದೇ ಗ್ಯಾರಂಟಿ ಈಡೇರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗ್ಯಾಸ್, ಪೆಟ್ರೋಲ್ ದುಪ್ಪಟ್ಟು ಹೆಚ್ಚಾಗಿದೆ. ಮೋದಿ ಅವರ ಪಕ್ಷದ ಹೆಸರೂ ಹೇಳದೆ ಮೋದಿ ಗ್ಯಾರಂಟಿ ಎನ್ನುತ್ತಾರೆ. ರಾಮನಿಗೆ ಮುಟ್ಟಿ ಹೇಳಲಿ. ಬಡವರಿಗೆ ಏನು ಮಾಡಿದ್ದಾರೆ ಎನ್ನುವುದು. ದೇವರ ಹೆಸರು ಹೇಳಿ ಬಡವರನ್ನು ತುಳಿಯುತ್ತಿದ್ದಾರೆ. ಇಡಿ, ಸಿಬಿಐ, ಐಟಿಯನ್ನು ಛೂಬಿಟ್ಟು ಮುಖಂಡರನ್ನು ಹೆದರಿಸುತ್ತಿದ್ದಾರೆ. ಭ್ರಷ್ಟರು ಎನ್ನುವ ಆ ವ್ಯಕ್ತಿಗಳು ಬಿಜೆಪಿ ಸೇರಿದ ತಕ್ಷಣ ಮೋದಿ ಪಕ್ಕ ಕುಳಿತು ಸ್ವಚ್ಛರಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ, ಕಲಬುರಗಿಯಿಂದ ಪ್ರಚಾರ ಆರಂಭಿಸಿ ಮೋದಿ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ಗ್ಯಾರಂಟಿಗಳನ್ನು ಕೊಡಲು ಬಿಜೆಪಿಯಿಂದ ಸಾಧ್ಯವಿಲ್ಲ. ಕೇವಲ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ನಾವು ಬದುಕಿನ ಏಳಿಗೆಗೆ ಶ್ರಮಿಸುತ್ತಿದ್ದೇವೆ. ನುಡಿದಂತೆ ಐದು ಗ್ಯಾರಂಟಿ ನೀಡಿದ್ದೇವೆ. ಕೇಂದ್ರದಲ್ಲೂ ಗ್ಯಾರಂಟಿ ಘೋಷಿಸಿದ್ದು, ನೀಡುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಎಐಸಿಸಿ ಕಾರ್ಯದರ್ಶಿ ರಣದೀಪ ಸುರ್ಜೆವಾಲ್, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ, ರಹೀಂಖಾನ್, ಪ್ರಿಯಾಂಕ್ ಖರ್ಗೆ, ಶಾಸಕರಾದ ಲಕ್ಷö್ಮಣ ಸವದಿ, ಬಿ.ಆರ್.ಪಾಟೀಲ್, ಡಾ.ಅಜಯಸಿಂಗ್, ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಚನ್ನಾರಡ್ಡಿ ಪಾಟೀಲ್ ತುನ್ನೂರ, ತಿಪ್ಪಣ್ಣಪ್ಪ ಕಮಕನೂರ, ಪ್ರಮುಖರಾದ ಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ ಬಾಬುರಾವ ಚಿಂಚನಸೂರ, ರೇವುನಾಯಕ ಬೆಳಮಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಇತರರಿದ್ದರು.