ಮೈಸೂರು: ರಾಜ್ಯದಲ್ಲಿ ಬರದ ಛಾಯೆಯಿರುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯ ಸಭೆ ಇಂದು ಅಥವಾ ನಾಳೆ ನಡೆಯಲಿದ್ದು, ಬಳಿಕ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಬರ ಘೋಷಣೆಯಾದ ನಂತರ ಆ ತಾಲೂಕುಗಳಲ್ಲಿ ಬರ ಪರಿಹಾರವಾಗಿ ಜನರಿಗೆ ಕೆಲಸ, ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಘೋಷಣೆಯಾದ ಮೇಲೆ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು. ಕೇಂದ್ರ ಸರ್ಕಾರದವರು ಪರಿಶೀಲಿಸಿದ ನಂತರ ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳ ಪ್ರಕಾರ ನೆರವು ನೀಡಲಿದ್ದಾರೆ ಎಂದರು.
ಮೋಡ ಬಿತ್ತನೆ ಇಂದಿನವರೆಗೂ ಎಲ್ಲಿಯೂ ಯಶಸ್ವಿಯಾಗಿಲ್ಲ. ಅದರಿಂದ ಪ್ರಯೋಜನವಾಗಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಮೈಸೂರಿನಲ್ಲಿ ಆ.30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 3 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. 4ನೇ ಗ್ಯಾರಂಟಿ ಜಾರಿಯಾಗಲಿದ್ದು, ಒಂದು ಲಕ್ಷಕ್ಕೂ ಹೆಚ್ವು ಜನ ಸೇರುವ ನಿರೀಕ್ಷೆ ಇದೆ. ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ನಾಲ್ಕು ಜಿಲ್ಲೆಗಳು ಸೇರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ದೇಶದಲ್ಲೇ ಇದು ದೊಡ್ಡ ಕಾರ್ಯಕ್ರಮ. ವರ್ಷದಲ್ಲಿ 32 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ ವರ್ಷ ಸುಮಾರು 18 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. 1.33 ಕೋಟಿ ಕುಟುಂಬಗಳ ಯಜಮಾನಿಗೆ 2000 ರೂ. ನೀಡಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳಿಂದ ಒಂದು ತಿಂಗಳಿಗೆ 4-5 ಸಾವಿರ ರೂ. ಒಂದು ಕುಟುಂಬಕ್ಕೆ ದೊರೆಯಲಿದೆ. ಇದರಿಂದ ಅವರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಅವರ ಕೈಯಲ್ಲಿ ದುಡ್ಡು ಇರುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಲಿದ್ದು, ಎಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಿರುತ್ತದೆಯೋ ಅಲ್ಲಿ ಜಿಡಿಪಿ ಕೂಡ ಬೆಳವಣಿಗೆ ಆಗುತ್ತದೆ. ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದು ತಿಳಿಸಿದರು.