ಜಿಲ್ಲೆ

ಮೋಟಾರು ವಾಹನ ಶುಲ್ಕ ಇಳಿಕೆ

ಕಾರವಾರ: ರಾಜ್ಯದಲ್ಲಿ 13ರಿಂದ 20 ಆಸನ ಸಾಮರ್ಥ್ಯ ಇರುವ ಒಪ್ಪಂದದ ವಾಹನಗಳಿಗೆ ಪ್ರತಿ ಆಸನಕ್ಕೆ 200 ರೂಪಾಯಿಗಳಷ್ಟು ಮೋಟಾರು ವಾಹನ ತೆರಿಗೆಯನ್ನು ಇಳಿಕೆ ಮಾಡಿ ಸರ್ಕಾರ ಆದೇಶಿಸಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಮೋಟಾರು ವಾಹನಗಳ ಅಧಿನಿಯಮ 1957ರಂತೆ ರಾಜ್ಯದಲ್ಲಿನ 13ರಿಂದ 20 ಆಸನ ಸಾಮರ್ಥ್ಯ ಇರುವ ಪ್ರತಿ ಆಸನಕ್ಕೆ ನಿಗದಿಪಡಿಸಿರುವ 900 ರೂ.ಗಳ ಮೋಟಾರು ವಾಹನ ತೆರಿಗೆಯನ್ನು 700 ರೂಪಾಯಿಗಳಿಗೆ ಕಡಿಮೆಗೊಳಿಸಿ ಸೆ. 29 ರಂದು ಸಾರಿಗೆ ಇಲಾಖೆ ಆದೇಶಿಸಿದೆ ಎಂದು ವಿವರಿಸಿದ್ದಾರೆ.

ಶಾಸಕಿ ರೂಪಾಲಿ ಅವರು ಕಳೆದ ವಿಧಾನಸಭೆ ಅಧಿವೇಶದಲ್ಲಿ ಟೆಂಪೋ ಮಾಲೀಕರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಟೆಂಪೋಗಳಲ್ಲಿ ಈಗ 13 (12+1) ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ಇದೆ. ಇದನ್ನು 20 (19+1)ಕ್ಕೆ ಹೆಚ್ಚಿಸಬೇಕು ಹಾಗೂ ತೆರಿಗೆಯನ್ನು ಇಳಿಸುವಂತೆ ಆಗ್ರಹಿಸಿದ್ದರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಇದಕ್ಕೆ ಸ್ಪಂದಿಸಿ, ನಿಯಮಾವಳಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಸರ್ಕಾರ ಈಗ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.