ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಲ್ಲಿ ಎತ್ತುಗಳ ಮೈ ತೊಳೆಯುತ್ತಿರುವಾಗ ಮೊಸಳೆ ದಾಳಿಗೊಳಗಾಗಿ ಬಲಗೈ ಕಳೆದುಕೊಂಡ ಧರಿಯಪ್ಪ ಮೇಟಿ ಎಂಬ ಯುವಕನಿಗೆ ಸೂಕ್ತ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಸೂಚಿಸಿದರು.
ಗದ್ದನಕೇರಿ ಕ್ರಾಸ್‍ನಲ್ಲಿ ಜಿ.ಪಂ ಲಿಂಕ್ ಡಾಂಕುಮೆಂಟಅಡಿ ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಕ್ರಮದಡಿ ಕೈಗೊಳ್ಳಲಾದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಿಬ್ಬಂದಿ ಅವರ ಕಚೇರಿ ನಿರ್ಮಾಣ ಕಾಮಾಗಾರಿಯ ಭೂ ಪೂಜೆ ನೆರವೇರಿಸಿ, ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರುತ್ರೇನ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಮೊಸಳೆ ದಾಳಿಗೆ ಕೈ ಕಳೆದುಕೊಂಡ ಯುವಕನಿಗೆ ಪತ್ನಿ ಹಾಗೂ ಇಬ್ಬರೂ ಮಕ್ಕಳಿದ್ದು, ಮುಂದಿನ ಉಪ ಜೀವನಕ್ಕಾಗಿ ಸೂಕ್ತ ಪರಿಹಾರಕ್ಕೆ ಕ್ರಮಕೈಗೊಳ್ಳಲು ತಿಳಿಸಿದರು.
ನಂತರ ಕುಂದರಗಿ ಬಳಿಯ ಇರುವ ಸುರಗಿ ಮಠ ಅರಣ್ಯ ಪ್ರದೇಶದಲ್ಲಿದ್ದು, ಆ ಪ್ರದೇಶವನ್ನು ಅವರಿಗೆ ಬಿಟ್ಟಿಕೊಟ್ಟು ಅವರು ಅರಣ್ಯ ಇಲಾಖೆಗೆ 5 ಎಕರೆ ಜಮೀನನ್ನು ನೀಡಲು ಒಪ್ಪಿಗೆ ನೀಡಿದ್ದಾರೆ. ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಅಲ್ಲಿಯ ಅನುಕೂಲಕ್ಕಾಗಿ ಆ ಪ್ರದೇಶವನ್ನು ಸುರಗಿ ಮಠಕ್ಕೆ ಒಪ್ಪಿಸಿ ಅವರು ಕೊಡಮಾಡಿದ 5 ಎಕರೆ ಜಮೀನಿನಲ್ಲಿ ಅರಣ್ಯ ಬೆಳೆಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೊಕನಾದಗಿ ಮತ್ತು ಛಬ್ಬಿ ಗ್ರಾಮದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬಾಗಲಕೋಟೆ ತಾಲೂಕಿನ ಯಂಕಂಚಿ ಗ್ರಾಮದ ಗುಡ್ಡದ ರಸ್ತೆಯ ಭೂಮಿ ಪೂಜೆ ನೆರವೇರಿಸಿ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಯಡಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಾಲಾ ನಾಲತ್ವಾಡ, ಉಪಾದ್ಯಕ್ಷ ಚಂದ್ರಶೇಖರ ಸಾಳಗುಂದಿ, ಜಿ.ಪಂ ಮಾಜಿ ಸದಸ್ಯ ಪಾಂಡು ಪೊಲೀಸ್, ಜಿ.ಪಂ ಮಾಜಿ ಅಧ್ಯಕ್ಷ ಆರ್.ಆರ್.ತುಂಬರಮಟ್ಟಿ, ಗ್ರಾ.ಪಂ ಮಾಜಿ ಅಧ್ಯಕ್ಷ ಸಂಗಣ್ಣ ನಾಲತ್ವಾಡ, ಮಹಾದೇವಪ್ಪ ಪೂಜಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ಮಿರ್ಜಿ, ವಲಯ ಅರಣ್ಯ ಅಧಿಕಾರಿ ಬಸವರಾಜ ಅರಿಶಿಣದ ಸೇರಿದಂತೆ ಇತರರು ಉಪಸ್ಥಿತರಿದ್ದರು.