ಜಿಲ್ಲೆ

ಮೊಸರು ಮಡಕೆ ಒಡೆದ ಯುವಕರು

ಚಾಮರಾಜನಗರ : ಶ್ರೀ ಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥ ಸಾಗುವ ಬೀದಿಯಲ್ಲಿ ಆಧುನಿಕ ಗೋಕುಲವೇ ನಿರ್ಮಾಣವಾಗಿತ್ತು. ಎತ್ತರದಲ್ಲಿ ಕಟ್ಟಿದ್ದ ಮೊಸರು ಮಡಕೆಯನ್ನು ಯುವಕರು ಒಡೆಯುವ ಮೂಲಕ ಸಂಭ್ರಮಿಸಿದರು.

ನಗರದ ರಥದ ಬೀದಿಯಲ್ಲಿ ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಮೊಸರು ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಪುಟಾಣಿ ಕೃಷ್ಣ ವೇಷಧಾರಿಗಳ ನಡುವೆ ಮಡಕೆ ಒಡೆಯಲು 6 ತಂಡಗಳಲ್ಲಿ ಯುವಕರು ಅಖಾಡಕ್ಕೆ ಸಿದ್ಧರಾಗಿದ್ದರು. ಎಲ್ಲ ತಂಡಗಳಿಗೂ ರಥದ ಬೀದಿಯ ಮಧ್ಯ ಭಾಗದ ಎತ್ತರದಲ್ಲಿ ಕಟ್ಟಲಾಗಿದ್ದ ಮಡಕೆಯನ್ನು ಒಡೆದುರುಳಿಸುವ ತವಕ ಹಾಗೂ ಗುರಿ ಇತ್ತು. ಆದರೆ ಒಂದೆಡೆ ಈ ಪ್ರಯತ್ನವನ್ನು ತಡೆಯಲು ನೀರನ್ನು ಎರಚಲು ಅಷ್ಟೇ ಯುವಕರು ಸಿದ್ಧರಾಗಿದ್ದರು. ಆದರೆ, ಮೊದಲ ಪ್ರಯತ್ನದಲ್ಲೇ ಮೊಸರು ಮಡಕೆಯನ್ನು ಒಡೆಯುವ ಮೂಲಕ ಯುವಕರು ಸಂಭ್ರಮಿಸಿದರು. ಈ ಸಂಭ್ರಮವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಯುವಕರು ಜಮಾಯಿಸಿದ್ದರು.

ಜಗತ್ತಿಗೆ ಶ್ರೀಕೃಷ್ಣ ನೀಡಿದ ಸಂದೇಶ ಸಾರ್ವಕಾಲಿಕವಾಗಿದ್ದು, ಪ್ರತಿಯೊಬ್ಬರಿಗೂ ನೆಮ್ಮದಿ ಸಿಗಲಿದೆ ಎಂದು ಮಂಡ್ಯ ಅಬಕಾರಿ ಡಿಸಿ ನಾಗಶಯನ ಹೇಳಿದರು. ನಗರದ ರಥದ ಬೀದಿಯಲ್ಲಿ ಆಯೋಜಿಸಿದ್ದ ಮೊಸರು ಮಡಕೆ ಒಡೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಶ್ರೀಕೃಷ್ಣ ಪ್ರತಿಷ್ಠಾನ ಕಳೆದ 15 ವರ್ಷಗಳಿಂದಲೂ ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೃಷ್ಣನ ಸಂದೇಶಗಳನ್ನು ಯುವಜನಾಂಗಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಶ್ರೀಕೃಷ್ಣನ ವಿಚಾರಧಾರೆ ಸಾರ್ವಕಾಲಿಕವಾಗಿದ್ದು, ಇಂತಹ ಉತ್ಸವಗಳು ಎಲ್ಲ ಜನರನ್ನೂ ಒಂದುಗೂಡಿಸುತ್ತದೆ ಎಂದು ತಿಳಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಡಿ.ಕೆ.ದಾನೇಶ್ವರಿ, ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ನಗರಸಭಾ ಸದಸ್ಯ ಚಂದ್ರಶೇಖರ್, ಯುವ ಮುಖಂಡ ಶ್ರೀನಿಧಿ ಕುದರ್, ಜಾನಪದ ಗಾಯಕ ಸುರೇಶ್ ನಾಗ್, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಪ್ರದೀಪ್ ಕುಮಾರ್ ದೀಕ್ಷಿತ್, ಶರಣ್ಯ ಋಗ್ವೇದಿ ಇತರರು ಹಾಜರಿದ್ದರು.

ಬಹುಮಾನ ವಿತರಣೆ:

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಹೂ ಕಟ್ಟುವ ಸ್ಪರ್ಧೆ, ಕಬಡ್ಡಿ ಸ್ಪರ್ಧೆ, ಕೆಸರುಗದ್ದೆ ಓಟ, ಶ್ರೀಕೃಷ್ಣನ ಕುರಿತಾದ ಕವನ ರಚಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ರಾಧಾ ಅಷ್ಪಮಿಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು. ನಗರದಾದ್ಯಂತ ರಾಮನಾಮ ಸ್ಮರಣೆ ಮತ್ತು ಭಜನೆಯೊಂದಿಗೆ ಶ್ರೀಕೃಷ್ಣ ಹಾಗೂ ಮೊಸರು ಮಡಕೆಯ ಮೆರವಣಿಗೆ ನಡೆಯಿತು.