ಜಿಲ್ಲೆ

ಮೊಳಕೆಗೆ ಮುನ್ನವೇ ಕಮರುತ್ತಿವೆ ಬೀಜ

ಮುಳಗುಂದ: ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂಗಾರು ಕ್ಷೀಣಿಸಿದ್ದರಿಂದ ಬಿತ್ತಿದ ಬೆಳೆಗಳೆಲ್ಲ ತೇವಾಂಶದ ಕೊರತೆಯಿಂದ ಮೊಳಕೆಯೊಡೆಯುವ ಮುನ್ನವೇ ಕಮರುತ್ತಿವೆ. ಇದರಿಂದಾಗಿ ರೈತರು ಮಮ್ಮಲ ಮರುಗುವಂತಾಗಿದೆ.

ಸತತ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿರುವ ಈ ಭಾಗದ ರೈತರು ಈ ವರ್ಷವಾದರೂ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಮುಂಗಾರು ಆರಂಭವಾಗಿ ವಾರ ಕಳೆಯುತ್ತ ಬಂದರೂ ವರುಣನ ದರ್ಶನವಾಗುತ್ತಲೇ ಇಲ್ಲ. ಹೀಗಾಗಿ ಬಿತ್ತಿದ ಬೀಜ ಒಣಗುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.

ಬೇಸಿಗೆ ಮುಗಿಯುತ್ತಿದ್ದಂತೆ ಮಳೆ, ಬೆಳೆ ಲೆಕ್ಕಾಚಾರದಲ್ಲಿ ತೊಡಗಿದ್ದ ರೈತರ ನಿರೀಕ್ಷೆಗಳೆಲ್ಲ ಇದೀಗ ಬುಡಮೇಲಾಗುತ್ತಿದೆ. ಹೀಗಾಗಿ ರೈತರು ಬೇಸಿಗೆಯಲ್ಲಿ ಜಮೀನು ಸ್ವಚ್ಛಗೊಳಿಸಿ ಹದವಾಗಿಟ್ಟುಕೊಂಡು ಹೆಸರು, ಗೆಜ್ಜೆ ಶೇಂಗಾ, ಬಿಟಿ ಹತ್ತಿ, ಗೋವಿನ ಜೋಳ, ಮತ್ತಿತರ ಬೀಜ ಬಿತ್ತಿದ್ದಾರೆ. ಆದರೆ, ಮಳೆಯಾಗದ ಪರಿಣಾಮ ಬೀಜಗಳು ಅರೆಬರೆಯಾಗಿ ಮೊಳಕೆಯೊಡೆದರೆ ಇನ್ನುಳಿದ ಬೀಜಗಳು ಮೊಳಕೆಯೊಡೆಯುವ ಮುನ್ನವೇ ಕಮರಿ ಹೋಗುತ್ತಿವೆ.

ಇನ್ನು ಬಿತ್ತಿದ ಬೀಜಗಳಿಗೆ ಇಲಿಗಳ ಕಾಟ ಶುರುವಾಗಿದೆ. ಮೊಳಕೆಯೊಡೆದ ಬೀಜಗಳನ್ನು ತಿನ್ನುತ್ತಿರುವ ಇಲಿಗಳ ಹಾವಳಿ ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲೊಂದು ಇಲ್ಲೊಂದು ಎಂಬಂತೆ ಉಳಿದಿರುವ ಬೆಳೆಯನ್ನು ಹರಗುವುದೋ ಹಾಗೆಯೇ ಬಿಡುವುದೋ ಎಂಬ ಚಿಂತೆ ರೈತರದ್ದಾಗಿದೆ.

ಮುಳಗುಂದ, ಚಿಂಚಲಿ, ಕಲ್ಲೂರ, ನೀಲಗುಂದ, ಸೀತಾಲಹರಿ, ಬಸಾಪೂರ ವ್ಯಾಪ್ತಿಯಲ್ಲಿ 2700 ಹೆಕ್ಟೇರ್ ಬಿ.ಟಿ. ಹತ್ತಿ, 850 ಹೆಕ್ಟೇರ್ ಶೇಂಗಾ, 2 ಸಾವಿರ ಹೆಕ್ಟೇರ್ ಹೆಸರು ಬೀಜ, 1350 ಹೆಕ್ಟೇರ್ ಹಬ್ಬು ಶೇಂಗಾ, 2100 ಹೆಕ್ಟೇರ್ ಗೋವಿನಜೋಳ, 1800 ಹೆಕ್ಟೇರ್ ಮೆಣಸಿನಕಾಯಿ ಬೀಜ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿ ಬಿಟಿ ಹತ್ತಿ ಬೆಳೆ ಗಣನೀಯ ಏರಿಕೆಯಾಗಲಿದ್ದು, ವಾಣಿಜ್ಯ ಬೆಳೆ ಮೆಣಸಿನಕಾಯಿ ಬೀಜ ಬಿತ್ತನೆ ಹೆಚ್ಚಾಗುವ ಸಾಧ್ಯತೆ ಇದೆ.| ಎಂ.ಬಿ. ಸುಂಕಾಪೂರ. ಕೃ.ಸ.ಅ. ಮುಳಗುಂದ
ಈ ಬಾರಿ ಉತ್ತಮ ಮುಂಗಾರು ಮಳೆಯಾಗಬಹುದೆಂಬ ನಿರೀಕ್ಷೆ ಇದ್ದರೂ ಪ್ರಾರಂಭದಲ್ಲೇ ಮಳೆ ಕೈಕೊಟ್ಟಿದೆ. ಜೊತೆಗೆ ಬಿತ್ತಿದ ಬೀಜಗಳಿಗೆ ಇಲಿಗಳ ಕಾಟ ಮತ್ತು ತೇವಾಂಶದ ಕೊರತೆ ರೈತರನ್ನು ಕಂಗೆಡುವಂತೆ ಮಾಡಿದೆ. ಸದ್ಯ ಭೂಮಿಯಲ್ಲಿ ತೇವಾಂಶದ ಕೊರತೆಯಿದ್ದು, ಮುಂದೆ ಏನು ಮಾಡುವುದು ಎಂದು ಚಿಂತಾಕ್ರಾಂತರಾಗಿದ್ದಾರೆ. | ದತ್ತಪ್ಪ ಯಳವತ್ತಿ, ರೈತ

EndFragment