ಹೊಳಲ್ಕೆರೆ: ಟಿವಿ, ಸ್ಮಾರ್ಟ್‌ಫೋನ್ ಹಾವಳಿಯಿಂದ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಶಾಸಕ ಡಾ.ಎಂ. ಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಚನ್ನಸಮುದ್ರ ಗ್ರಾಮದಲ್ಲಿ ಹೊಳಲ್ಕೆರೆಯ ಕನ್ನಡ ಜಾನಪದ ಪರಿಷತ್‌ನಿಂದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ದಸರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ವೀರಗಾಸೆ ಮತ್ತು ಭಜನಾ ಮೇಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ನೃತ್ಯ ಮತ್ತು ಗೀತೆಗಳು ಇನ್ನೂ ಜೀವಂತವಾಗಿವೆ. ಅಲ್ಲಿ ಕಲೆಗಳನ್ನು ಆಸ್ವಾದಿಸುವವರು ಇರುವುದರಿಂದ ಉಳಿದುಕೊಂಡಿದೆ. ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಹೇಳಿದರು.
ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಗ್ರಾಪಂ ಅಧ್ಯಕ್ಷ ದಾನವೇಂದ್ರ, ಪರಿಷತ್ ಅಧ್ಯಕ್ಷ ರಾ.ಸು. ತಿಮ್ಮಯ್ಯ, ರಾಮಪ್ಪ, ಮೈಲಾರಪ್ಪ, ಜಯಂತಿ, ಶ್ರೀನಿವಾಸ್, ರಾಮಚಂದ್ರಪ್ಪ, ಪುರುಷೋತ್ತಮ, ಸ್ವಾಮಿ, ಗೋಪಿನಾಥ್ ಇತರರಿದ್ದರು.