ಸಿಂದಗಿ: ಪಾದ್ರಿ ಹರ್ಮನ್ ಮೋಗ್ಲಿ ಅವರ ಮೂಲಕ ಜರ್ಮನ್ ತಾಂತ್ರಿಕತೆಯ ಕಲ್ಲಚ್ಚುಮನೆಯಲ್ಲಿ ಮಂಗಳೂರು ಸಮಾಚಾರ ಪತ್ರಿಕೆ ಆರಂಭಗೊಂಡಿತು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಹೇಳಿದರು.
ಪಟ್ಟಣದಲ್ಲಿ ತಾಲೂಕು ಘಟಕದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಂಗಳೂರ ಸಮಾಚಾರ ಪತ್ರಿಕೆ ಪ್ರಾರಂಭವಾಗಿ 180 ವರ್ಷವಾಗಿದ್ದು, ಅಲ್ಲಿಂದ ಬೆಳೆದು ಬಂದ ಪತ್ರಿಕಾರಂಗಕ್ಕೆ ಬಹುದೊಡ್ಡ ಇತಿಹಾಸವಿದೆ. ಮೊಬೈಲ್ ಜ್ಞಾನದ ಸಾಧನವಾಗಿದೆ. ಅದರ ಸದ್ಬಳಕೆಯೂ ಅಗತ್ಯವಿದೆ. ವ್ಯವಧಾನ, ಸಮಯ ಪ್ರಜ್ಞೆ ರೂಢಿಸಿಕೊಂಡು ಬದುಕು ಉಜ್ವಲಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಧಾರವಾಡದ ಸಂಪನ್ಮೂಲ ವ್ಯಕ್ತಿ ರಂಗನಾಥ ಥೋರ್ಪೆ ಉಪನ್ಯಾಸ ನೀಡಿ, ಪತ್ರಕರ್ತನಿಗೆ ಸಂಶಯ ಬುದ್ಧಿ ಅಗತ್ಯ. ಪತ್ರಕರ್ತ ಕೆಟ್ಟದ್ದಕ್ಕಿಂತ ಹೆಚ್ಚು ಒಳ್ಳೆಯದನ್ನೇ ಬಯಸುತ್ತಾನೆ. ವಚನ ಸಾಹಿತ್ಯ ಪರಿಚಯಿಸಿದ ಫ.ಗು. ಹಳಕಟ್ಟಿ, ಗೋಕಾಕ ಚಳವಳಿಯ ರೂವಾರಿ ರೇ.ಚ. ರೇವಡಿಗಾರ ಕೂಡ ಹಿರಿಯ ಪತ್ರಕರ್ತರೇ ಆಗಿದ್ದರು. ಪತ್ರಕರ್ತ ಸಮಾಜದ ಆರೋಗ್ಯಕ್ಕಾಗಿ ಸದಾ ಕಾಲ ಅಧ್ಯಯನಶೀಲನಾಗಿರಬೇಕು. ಅಕ್ಷರ ಪ್ರೀತಿಯಿಂದ ಸೇವೆ ಮಾಡುವ ಪತ್ರಕರ್ತರ ಪ್ರಾಮಾಣಿಕತೆಯನ್ನು ಸಮಾಜ ಗುರುತಿಸಬೇಕಿದೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಆನಂದ ಶಾಬಾದಿ, ಪ್ರಾಚಾರ್ಯ ಎನ್.ಆರ್.ಗಂಗನಳ್ಳಿ ಮಾತನಾಡಿದರು.
ಆದಿಶೇಷ ಸಂಸ್ಥಾನದ ಪೂಜ್ಯ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಭಾವಿ ಇದ್ದರು.
ಜಿಲ್ಲಾ ಉತ್ತಮ ಪತ್ರಕರ್ತ ಗೌರವಕ್ಕೆ ಪಾತ್ರರಾದ ರಮೇಶ ಹೂಗಾರ ಹಾಗೂ ರವಿಚಂದ್ರ ಮಲ್ಲೇದ ಮತ್ತು ನೂತನ ಕಾರ್ಯದರ್ಶಿ ಮಹಾಂತೇಶ ನೂಲಾನವರ ಹಾಗೂ ಖಜಾಂಚಿ ಭೋಜರಾಜ ದೇಸಾಯಿ ಅವರನ್ನು ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿಗಳಾದ ಡಾ. ಎಂ.ಎಂ. ಪಡಶೆಟ್ಟಿ, ಡಾ. ಚನ್ನಪ್ಪ ಕಟ್ಟಿ, ಉಪನ್ಯಾಸಕ ಬಿ.ಎನ್. ಬಿರಾದಾರ, ಎಂ.ಎಂ. ಯಾಳಗಿ, ಎಸ್.ಎಸ್. ಪಾಟೀಲ, ಅನೀಲ ರಜಪೂತ, ಶಶಿಧರ ಅವಟಿ, ಶಿವಾನಂದ ಬಿರಾದಾರ, ಗುರು ಸುಣಗಾರ, ರಾಜಶೇಖರ ನರಗೋದಿ, ಪತ್ರಕರ್ತರಾದ ನಾಗೇಶ ತಳವಾರ, ಚಂದ್ರಕಾಂತ ಮಾವೂರ, ಭೀಮು ಕೆಂಭಾವಿ, ಎಂ.ಎ. ಖತೀಬ, ಗುಂಡು ಕುಲಕರ್ಣಿ, ಗುರುರಾಜ ಮಠ, ನವೀನ ಶಳ್ಳಗಿ, ಶಾಂತವೀರ ಹಿರೇಮಠ, ಸಿದ್ದು ಮಲ್ಲೇದ ಇತರರಿದ್ದರು.