ಚಿಕ್ಕಬಳ್ಳಾಪುರ : ಜಿಲ್ಲೆಗೂ ಕರೊನಾ ಸೋಂಕು ಪತ್ತೆಗೆ ಗಂಟಲು ದ್ರವ ಸಂಗ್ರಹಿಸುವ ಕೋವಿಡ್ 19 ಪರೀಕ್ಷೆಯ ಮೊಬೈಲ್ ಬೂತ್ ಬಂದಿದೆ.
ಜಿಲ್ಲಾ ಕೇಂದ್ರದಲ್ಲಿನ ಮರಳು ಸಿದ್ದೇಶ್ವರ ಸ್ವಾಮಿ ವೃತ್ತದಲ್ಲಿ ಎರಡು ಮೊಬೈಲ್ ಬೂತ್‌ಗೆ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಚಾಲನೆ ನೀಡಿದರು.
ಕರೊನಾ ಸೋಂಕಿನ ಬಗ್ಗೆ ಅನುಮಾನ ಹೊಂದಿರುವ ಜನರು ಬೂತ್‌ಗೆ ಬಂದು ಗಂಟಲು ದ್ರವ ನೀಡಬಹುದು. ಇದರಲ್ಲಿ ಮೊದಲು ಪೊಲೀಸ್, ಕರೊನಾ ವಾರಿಯರ್ಸ್ ಸೇರಿ ಹಲವರು ಪರೀಕ್ಷೆಗೊಳಗಾಗಲು ಸೂಚಿಸಲಾಗಿದೆ. ಎರಡು ದಿನಗಳೊಳಗೆ ವರದಿ ಬರುತ್ತದೆ. ಪರೀಕ್ಷೆಯಿಂದ ಆತಂಕ ದೂರವಾಗುತ್ತದೆ ಎಂದರು.ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಮುಂಜಾಗ್ರತಾ ಕ್ರಮಗಳಿಂದ ಸೋಂಕಿನ ನಿಯಂತ್ರಣದಲ್ಲಿ ಕರ್ನಾಟಕ ಯಶಸ್ವಿಯಾಗಿದೆ ಎಂದರು.
ಪ್ಲಾಸ್ಮಾ ಥೆರಪಿಗೆ ರೋಗಿ ಸಿಗುತ್ತಿಲ್ಲ : ಕೇಂದ್ರ ಸರ್ಕಾರವು ಗಂಭೀರ ಪರಿಸ್ಥಿತಿಯಲ್ಲಿರುವ ಕರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ಈ ಚಿಕಿತ್ಸೆಗೆ ಆಯ್ಕೆ ಮಾಡಲು ಶ್ವಾಸಕೋಶ ಸೋಂಕು, ತೀವ್ರ ಉಸಿರಾಟ ಸಮಸ್ಯೆಯಿಂದ ಬಾಧಿತರಾಗಿರುವುದು ಎಂಬುದು ಸೇರಿ ಕೆಲ ಮಾನದಂಡಗಳಿವೆ. ಆದರೆ, ಇದಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಸೂಕ್ತ ರೋಗಿಗಳೇ ಸಿಗುತ್ತಿಲ್ಲ. ಬಹುತೇಕ ಸೋಂಕಿತರು ತ್ವರಿತವಾಗಿ ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ತಿಳಿಸಿದ್ದಾರೆ.
1270 ಸ್ಯಾಂಪಲ್ ಸಂಗ್ರಹ : ಇಲ್ಲಿಯವರೆಗೂ ಜಿಲ್ಲೆಯಲ್ಲಿ 1270 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ 939 ವರದಿಗಳು ನೆಗೆಟಿವ್ ಆಗಿದ್ದು 18 ಪ್ರಕರಣಗಳು ಪಾಸಿಟಿವ್ ಆಗಿದೆ. ಬರೋಬ್ಬರಿ 313 ಮಾದರಿಗಳ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಂ.ಯೋಗೀಶ್‌ಗೌಡ ತಿಳಿಸಿದ್ದಾರೆ.