ಮೈಸೂರು: ಮೊಬೈಲ್ ಕಡೆ ಗಮನ ಬಿಟ್ಟು, ಸ್ನೇಹದ ಮನಸ್ಸುಗಳನ್ನು ಬೆಸೆಯುವ ಕಡೆಗೆ ಗಮನ ನೀಡಿ ಎಂದು ನಟ ವಿಜಯರಾಘವೇಂದ್ರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ, ಸಾಂಸ್ಕೃತಿಕ ವೇದಿಕೆಯಿಂದ ಶನಿವಾರ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್ ಕ್ರಾಸ್ ಚಟುವಟಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳಿಗೆ ಜೋತು ಬೀಳುತ್ತಿದ್ದು, ಸ್ನೇಹ, ಮಾನವೀಯ ಸಂಬಂಧ, ಜೀವನದ ಮಧುರ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ಕಡೆ ಗಮನ ಬಿಟ್ಟರೆ ಮನಸ್ಸುಗಳು ಬೆಸೆಯುವ ಸ್ನೇಹ ಸಂಬಂಧ ಬೆಳೆಯುತ್ತದೆ. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು ಎಂದರು.
ಮೈಸೂರಿಗೂ ನನಗೂ ಅವಿನಾಭಾವ ಸಂಬಂಧವಿದ್ದು, ನಾನು ಹುಟ್ಟಿದ್ದು ಇದೇ ಊರು ಎನ್ನುವ ಭಾವನಾತ್ಮಕ ಬಂಧವಿದೆ. ಅಲ್ಲದೇ ನನ್ನನ್ನು ಗುರುತಿಸುವಂತೆ ಮಾಡಿದ ಚಿನ್ನಾರಿ ಮುತ್ತ ಚಿತ್ರೀಕರಣ ಕೂಡ ಮೈಸೂರು ಸಮೀಪದ ಮಹದೇವಪುರದಲ್ಲಿ ನಡೆದಿದೆ. ಹಾಗಾಗಿ ಇಲ್ಲಿಗೆ ಬರಲು ನೆಪ ಸಿಕ್ಕರೆ ಸಾಕು ತಪ್ಪದೆ ಬಂದು ಬಿಡುತ್ತೇನೆ. ಸುಂದರ ನಗರ ನನಗೆ ಇಷ್ಟ ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ತೊಡಗಿಕೊಳ್ಳಬೇಕು. ಪಠ್ಯ ಜೀವನ ನೀಡಿದರೆ, ಪಠ್ಯೇತರ ಚಟುವಟಿಕೆಗಳು ಕೂಡ ನಮಗೆ ಜೀವನಾನುಭವವನ್ನು ನೀಡುತ್ತವೆ ಎಂದು ತಿಳಿಸಿದರು.
ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಶಿಸ್ತು, ಸಂಯಮದಿಂದ ಇರುವುದು ಖುಷಿ ನೀಡಿದೆ. ಒಂದು ಶಿಕ್ಷಣ ಸಂಸ್ಥೆಯಲ್ಲಿ ಗುರುಗಳು ಯಾವ ರೀತಿ ಇರುತ್ತಾರೋ, ಅದೇ ರೀತಿ ವಿದ್ಯಾರ್ಥಿಗಳೂ ಇರುತ್ತಾರೆ. ಈ ಶಿಸ್ತು, ಸಂಯಮ ಹೀಗೆ ಮುಂದುವರಿಯಲಿ ಎಂದರು.
ಕೆಲ ತಿಂಗಳ ಹಿಂದೆ ಕುಸಿದು ಬಿದ್ದಿರುವ ಮಹಾರಾಣಿ ಕಾಲೇಜು ಕಟ್ಟಡಗಳ ಅಭಿವೃದ್ಧಿ ಕಾಮಗಾರಿಯ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರೊಂದಿಗೆ ಮಾತನಾಡಿದ್ದೇನೆ. ಅಧಿವೇಶನ ಮುಗಿದ ನಂತರ ಮೈಸೂರಿಗೆ ಭೇಟಿ ನೀಡಿ, ಕಾಲೇಜನ್ನು ಪರಿಶೀಲನೆ ಮಾಡುವ ಮೂಲಕ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ನನ್ನಿಂದ ಅಗುವ ಸಹಕಾರ ನೀಡುವುದಾಗಿ ತಿಳಿಸಿದರು.
ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ:
ಮುಖ್ಯಮಂತ್ರಿ ರೆಕಮೆಂಡೇಷನ್ ಅವಾರ್ಡ್ ಪಡೆದಿರುವ ಎನ್‌ಸಿಸಿ ವಿದ್ಯಾರ್ಥಿನಿಯರಾದ ಸುನೀತಾ ಶಿವಣ್ಣ, ಮಾನ್ಯಾ, ಶಾಲಿನಿ, ಉತ್ತಮ ನಾಯಕತ್ವ ಗುಣ ಇರುವ ವರಲಕ್ಷ್ಮೀ, ಭೂಮಿಕಾ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತಕುಮಾರ್, ಸಾಂಸ್ಕೃತಿಕ ವೇದಿಕೆ ಅಧ್ಯಾಪಕ ಕಾರ್ಯದರ್ಶಿ ಡಾ.ಆರ್.ಜಯರಾಜ್, ಅಧ್ಯಾಪಕ ಖಜಾಂಚಿ ಡಾ.ಬಿ.ಸವಿತಾ, ವಿದ್ಯಾರ್ಥಿ ಅಧ್ಯಕ್ಷೆ ಪ್ರಿಯಾಂಕಾ, ಕಾರ್ಯದರ್ಶಿ ಜೈಬಾ ಇತರರು ಇದ್ದರು.