ಜಿಲ್ಲೆ

ಮೊಬೈಲ್ ಬಿಟ್ಟು ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಿ

ಮೈಸೂರು: ಮಾರ್ಗದರ್ಶಕರ ಅಗತ್ಯತೆ ವಿದ್ಯಾರ್ಥಿಗಳಿಗೆ ಬೇಕಿದೆ. ಮಾರ್ಗದರ್ಶನವು ಇಂದಿನ ಪೀಳಿಗೆಯನ್ನು ಉತ್ತಮ ದಿಕ್ಕಿನೆಡೆಗೆ ಕೊಂಡೊಯ್ಯಬಲ್ಲುದು ಎಂದು ಮೈಸೂರು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ನಾತಕ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಧ್ಯವಾದಷ್ಟು ಮೊಬೈಲ್ ಎಂಬ ಕೆಟ್ಟ ಸಂಸ್ಕೃತಿಯಿಂದ ಹೊರಬಂದು ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಶರಣಾಗತಿಯು ವಿಕಸನಕ್ಕೆ ಸಹಾಯಕವಾಗುತ್ತದೆ. ಶಿಸ್ತು ಮತ್ತು ಶರಣಾಗತಿಯಿಂದ ಉತ್ತಮ ಭವಿಷ್ಯ ಸಾಧ್ಯ. ಸುಸಂಸ್ಕೃತಿಯಿಂದ ಸರಳವಾಗಿ ಬದುಕುವುದನ್ನು ಕಲಿಯಿರಿ ಎಂದು ತಿಳಿಸಿದರು.

ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ಪ್ರಶಸ್ತಿ ಮತ್ತು ಬಹುಮಾನಗಳಿಗೆ ಮಾತ್ರವೇ ಸ್ಪರ್ಧೆಗಳಲ್ಲಿ ಭಾಗವಹಿಸಬಾರದು. ಸೋಲು ಕೂಡ ಸ್ವೀಕಾರಾರ್ಹವೇ ಆಗಿರುತ್ತದೆ. ಆದ್ದರಿಂದ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಹೇಳಿದರು.

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ತರಬೇತುದಾರ, ರಾಜ್ಯಮಟ್ಟದ ಹಾಕಿ ಕ್ರೀಡಾಪಟು ಎಸ್.ಪಿ.ಕೃತಿಕಾ ಮಾತನಾಡಿ, ಶಿಸ್ತು, ಸಮರ್ಪಣೆ ಮತ್ತು ನಿರ್ಧಾರ ಈ ಮೂರು ಸೂತ್ರಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಇವುಗಳು ವಿದ್ಯಾರ್ಥಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತವೆ. ವಿದ್ಯೆ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ಬದುಕಿನ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಮಾಡುತ್ತವೆ ಎಂದು ಹೇಳಿದರು.

ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಕಲೆ, ಸಾಹಿತ್ಯ ಮತ್ತು ಮನರಂಜನಾ ಮಾಧ್ಯಮಗಳನ್ನು ಇಂತಹ ವೇದಿಕೆಗಳು ಸಂಸ್ಕೃತಿಗೆ ಅಭಿಮುಖವಾಗಿ ಬೆಳೆಸುವುದರ ಜತೆಗೆ ಯುವ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುತ್ತವೆೆ.

ನಮ್ಮ ಕನ್ನಡ ಚಲನಚಿತ್ರರಂಗದ ಕಲಾವಿದರು ಕಲೆಯ ಮೂಲಕ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಹೋಗಿದ್ದಾರೆ. ಅಂತಹವರ ಬದುಕು ನಮಗೆ ಆದರ್ಶವಾಗಬೇಕು ಎಂದರು. ವಚನ ಸಾಹಿತ್ಯ, ಕೀರ್ತನೆಗಳು ನಮ್ಮ ಬದುಕಿನ ಭಾಗವಾಗಿವೆ. ಅವುಗಳನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂಘಟನಾ ಚತುರತೆ, ನಾಯಕತ್ವ ಗುಣ, ವಿಮರ್ಶಾತ್ಮಕ ದೃಷ್ಟಿಕೋನ, ವಾಕ್ಚಾತುರ್ಯ, ಧೈರ್ಯ, ಸ್ಥೈರ್ಯ, ನೈತಿಕತೆ ಮೊದಲಾದ ಉತ್ತಮ ಗುಣಗಳು ವೃದ್ಧಿ ಹೊಂದುತ್ತವೆ. ಕ್ರೀಡೆ ದೇಹವನ್ನು ಸದೃಢವಾಗಿಸುತ್ತದೆ. ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸುತ್ತದೆ. ಆತ್ಮಗೌರವ ಮತ್ತು ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸುತ್ತದೆ. ಶಿಸ್ತನ್ನು ಬೆಳೆಸುತ್ತದೆ ಎಂದರು.

ಬದುಕಿನಲ್ಲಿ ಗುರಿ ಇರಬೇಕು. ಗುರಿ ಮಹತ್ವದ್ದಾಗಿರಬೇಕು. ಗುರಿ ಸಾಧಿಸಲು ಅಚಲ ಹೋರಾಟವಿರಬೇಕು. ಯಶಸ್ಸು ವ್ಯಕ್ತಿಯ ಇಚ್ಛಾಶಕ್ತಿ, ಪರಿಶ್ರಮ ಮತ್ತು ಸಾಮರ್ಥ್ಯದಿಂದ ನಿರ್ಧರಿಸಲ್ಪಡುತ್ತದೆ. ಶ್ರದ್ಧೆ, ಬದ್ಧತೆ ಮತ್ತು ಚಲವಾದ ನಂಬಿಕೆಯಿಂದ ಯಶಸ್ಸು ಸಾಧಿಸಿ ಎಂದು ಹೇಳಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ವಿ.ಶಿವ, ಕ್ರೀಡಾ ವೇದಿಕೆ ಸಂಚಾಲಕ ಎಂ. ಕಾರ್ತಿಕ್ ಇನ್ನಿತರರಿದ್ದರು.