ಶನಿವಾರಸಂತೆ: ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಪುನಿತ್ ತಾಳೂರು ಸಲಹೆ ನೀಡಿದರು.
ಸುಪ್ರಜ ಗುರುಕುಲ ಆಂಗ್ಲಮಾದ್ಯಮ ಶಾಲಾ ವಿದ್ಯಾರ್ಥಿಗಳಿಗೆ ನಂ 1 ನ್ನಡ ದಿನಪತ್ರಿಕೆ ‘ವಿಜಯವಾಣಿ’ ವಿತರಿಸಿ ಮಾತನಾಡಿದರು.
ದಿನ ಪತ್ರಿಕೆಗಳನ್ನು ಮಕ್ಕಳು ಪ್ರತಿ ನಿತ್ಯ ಓದುವ ಮೂಲಕ ದೇಶ ವಿದೇಶಗಳಲ್ಲಿ ನಡೆಯುವ ಪ್ರತಿ ನಿತ್ಯದ ವಿಚಾರಗಳನ್ನು ತಿಳಿದುಕೊಳ್ಳಬಹುದು. ಪತ್ರಿಕೆಗಳನ್ನು ಓದುವುದರಿಂದ ನಮ್ಮಲ್ಲಿರುವ ಜ್ಞಾನ ಹೆಚ್ಚಾಗುತ್ತದೆ. ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂದು ಮನೆ ಮನೆಗಳಲ್ಲಿ ಕುಟುಂಬದ ಸಂಬಂಧಗಳು ದೂರವಾಗುತ್ತಿದೆ. ಇದಕ್ಕೆ ಕಾರಣ ಅತಿಯಾದ ಮೊಬೈಲ್ ಬಳಕೆ. ನಾವು ಎಲ್ಲಿಯವರೆಗೆ ಮೊಬೈಲ್ ಅನ್ನು ತಲೆ ತಗ್ಗಿಸಿ ನೋಡುತ್ತೇವೆಯೋ ಅಲ್ಲಿಯವರೆಗೆ ಅದು ನಮ್ಮನ್ನು ತಲೆ ಎತ್ತಲು ಬಿಡುವುದಿಲ್ಲ. ಪತ್ರಿಕೆ, ಪುಸ್ತಕಗಳನ್ನು ತಲೆ ತಗ್ಗಿಸಿ ಓದಿ, ಅವು ನಿಮ್ಮನ್ನು ಎಂದಿಗೂ ತಲೆ ತಗ್ಗಿಸಲು ಬಿಡುವುದಿಲ್ಲ ಎಂದರು.
ಪ್ರಾಂಶುಪಾಲರಾದ ಸುಜಲಾ ದೇವಿ, ಉದ್ಯಮಿ ಪ್ರತಾಪ್, ಪತ್ರಕರ್ತ ದಿನೇಶ್ ಮಾಲಂಬಿ ಇತರರಿದ್ದರು.