ಆಲಮಟ್ಟಿಯ ಎಂಎಚ್‌ಎಂ ಕಾಲೇಜಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಭಾಭವನದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಸಿದ್ದರೇಣುಕಾ ಶಿವಾಚಾರ್ಯರು ಚಾಲನೆ ನೀಡಿದರು. ಪಿ.ಎ. ಹೇಮಗಿರಿಮಠ, ಜಿ.ಎಂ. ಕೋಟ್ಯಾಳ, ಮಂಜುನಾಥ ಹಿರೇಮಠ ಇತರರಿದ್ದರು. 
ಜಿಲ್ಲೆ

ಮೊಬೈಲ್ ಬಳಕೆಯಿಂದ ದೂರವಿರಿ

ಆಲಮಟ್ಟಿ: ಮೊಬೈಲ್ ಬಿಡಿ ಪುಸ್ತಕ ಹಿಡಿ, ಓದುವ ಹವ್ಯಾಸ ಬೆಳೆಸಿಕೊಳ್ಳಿ. ಆಸ್ತಿಯನ್ನು ಕದಿಯಬಹುದು, ಆದರೆ, ಜ್ಞಾನವನ್ನು ಯಾರೂ ಕದಿಯಲಾರರು. ವಿದ್ಯೆಗೆ ಬೆಲೆ ಕಟ್ಟಲು ಆಗುವುದಿಲ್ಲ ಎಂದು ಸಿದ್ದರೇಣುಕಾ ಶಿವಾಚಾರ್ಯರು ಹೇಳಿದರು.

ಸ್ಥಳೀಯ ಎಂಎಚ್‌ಎಂ ಕಾಲೇಜಿನ ಲಿಂ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಸಕ್ತ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದಾಗಿ ದೂರವಿರಬೇಕು. ಓದುವ ಹವ್ಯಾಸ, ಆಸಕ್ತಿ ತುಂಬಾ ಕಡಿಮೆ ಆಗಿದೆ. ಓದುವ ಆಸಕ್ತಿ ಬೆಳಿಸಿಕೊಳ್ಳುವುದರ ಜತೆಗೆ ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳು ತಂದೆ, ತಾಯಿ ಹಾಗೂ ಗುರು-ಹಿರಿಯರಿಗೆ ವಿನಯ- ವಿಧೇಯತೆಯಿಂದ ವರ್ತಿಸಿ, ಕಲಿತ ಶಾಲೆಗೆ ಕೀರ್ತಿ ಹುಟ್ಟಿದ ಊರಿನ ಹೆಸರನ್ನು ತರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಎ. ಹೇಮಗಿರಿಮಠ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಗಾಗಿ ಪಾಲಕರು ಹಾಗೂ ಶಿಕ್ಷಕರು ಸಹಕರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪಾಲಕರು ಮತ್ತು ಶಿಕ್ಷಕರು ಪ್ರಾಮಾಣಿಕವಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಮಾಡಿದರೆ ಶಿಕ್ಷಣ ಕ್ಷೇತ್ರ ಉತ್ತಮವಾಗುತ್ತದೆ ಎಂದರು.

ಹಳಕಟ್ಟಿಯ ಆರ್‌ಬಿಪಿಜಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ. ಕೋಟ್ಯಾಳ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ, ಎಸ್.ಬಿ. ದಳವಾಯಿ, ಸತೀಶ ಚವ್ಹಾಣ, ಬಿ.ವಿ. ಶಿವಯೋಗಿಮಠ, ಪಿ.ವೈ. ಧನಶೆಟ್ಟಿ, ಟಿ.ಬಿ. ಕರದಾನಿ, ಎಂ.ಎನ್. ಕರೆಮುರಗಿ, ಎಂ.ಎಸ್. ಸಜ್ಜನ ಇತರರಿದ್ದರು.