ಜಿಲ್ಲೆ

ಮೊಬೈಲ್ ಬಳಕೆಯಿಂದ ದೂರ ಇರಿ

ಮೈಸೂರು: ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರ ಇರಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದರು.


ನಮೋ-ಪ್ರಮತಿ ವತಿಯಿಂದ ಕುವೆಂಪುನಗರದ ಪ್ರಮತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಧ್ಯಯನ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.


ಮೊಬೈಲ್ ಅತಿಯಾದ ಬಳಕೆ ಸರಿಯಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಅದನ್ನು ಉಪಯೋಗಿಸಬೇಕು. ಅದರಲ್ಲೂ ಪರೀಕ್ಷೆ ಎದುರಿಸುವವರು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಫೋನ್‌ನಲ್ಲೇ ಮುಳುಗಿ ಹೋದರೆ ಸಮಯ ವ್ಯರ್ಥವಾಗಲಿದೆ. ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಎನ್ನುವುದನ್ನು ಬಿಟ್ಟು ಅಧ್ಯಯನದ ಕಡೆಗೆ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.


ಹಳ್ಳಿಯಿಂದ ಬಂದವನು, ಕನ್ನಡದಲ್ಲಿ ಓದಿದ್ದೇನೆ, ಇಂಗ್ಲಿಷ್‌ನಲ್ಲಿ ಕಡಿಮೆ ಅಂಕ ಪಡೆದಿದ್ದೇನೆ ಎಂಬುದೆಲ್ಲ ಸಮಸ್ಯೆಯಲ್ಲ. ಇಂತಹ ವಿಚಾರಗಳನ್ನು ಬದಿಗೊತ್ತಿ ಶ್ರಮ, ಬದ್ಧತೆ ಇದ್ದರೆ ಗುರಿ ತಲುಪಬಹುದು. ಅಧ್ಯಯನ ವಿಚಾರದಲ್ಲಿ ರಾಜಿ ಆಗಬಾರದು ಎಂದರು.


ಐಎಎಸ್, ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸುವಾಗಲೇ ಇದರಲ್ಲಿ ಪಾಸಾಗದಿದ್ದರೆ ಬೇರೆ ಹುದ್ದೆಯನ್ನಾದರೂ ಪಡೆಯುತ್ತೇನೆ ಎನ್ನುವ ಪ್ಲಾನ್-ಬಿ ಇರಬೇಕು. ಆದರೆ ಯುಪಿಎಸ್‌ಸಿಯಲ್ಲಿ ಉತ್ತೀರ್ಣನಾಗುವೆ ಎಂಬ ಛಲದಲ್ಲಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.


ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಮಾಲತಿ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜ ಹಾಜರಿದ್ದರು.